ವಿದ್ಯುತ್ ಸಂಪರ್ಕ ಪಡೆದ ಉಷಾ ಪರಮೇಶ್ವರ ಪೂಜಾರಿ ಅವರ ಮನೆ.  
ಉಡುಪಿ

ಎರಡು ವರ್ಷದ ಕತ್ತಲೆ ವಾಸಕ್ಕೆ ಮುಕ್ತಿ

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಗ್ರಾಮದ ಪಾಲೇದು ಕೊಲ್ಯಾತ್ತಾರು ನಿವಾಸಿ ಉಷಾ ಪರಮೇಶ್ವರ ಪೂಜಾರಿ ಎಂಬುವರ ಕುಟುಂಬಕ್ಕೆ ಎರಡು ವರ್ಷದ ಬಳಿಕ ವಿದ್ಯುತ್ ಸಂಪರ್ಕ ದೊರೆತಿದ್ದು, ಕತ್ತಲಿನ ಜೀವನಕ್ಕೆ ಮುಕ್ತಿ ದೊರೆತಿದೆ.
ಉಷಾ ಹಾಗೂ ಅವರ ಪತಿ ಕೂಲಿ ಕೆಲಸ ಮಾಡಿ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ಅವರು ವಾಸಿಸುತ್ತಿದ್ದ ಚಿಕ್ಕ ಮನೆ ಕುಸಿದು ಬಿದ್ದ ಬಳಿಕ ಯಾರೋ ಹೇಳಿದ ಕಾರಣಕ್ಕೆ ವಿದ್ಯುತ್ ಮೀಟರ್ ಅನ್ನು ಇಲಾಖೆಗೆ ಹಿಂದಿರುಗಿಸಿದ್ದರು.
ನಂತರ ಪಂಚಾಯಿತಿಯಿಂದ ಹೊಸ ಮನೆ ಮಂಜೂರಾಗಿ ಸಿಮೆಂಟ್ ಶೀಟ್ ಹಾಕಿ ಮನೆ ನಿರ್ಮಾಣವಾಯಿತು. ಆದರೆ ಇಲಾಖೆಯ ಕಾನೂನು ತೊಡಕು ಮತ್ತು ಹೆಚ್ಚುವರಿ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ಕಳೆದ ಎರಡು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಸಿಗದೆ ಚಿಮಿಣಿ ದೀಪದ ಬೆಳಕಿನಲ್ಲೇ ದಿನ ದೂಡುತ್ತಿದ್ದರು.

ಶಾಸಕರ ಮಧ್ಯಪ್ರವೇಶ

ವಿಷಯ ತಿಳಿದ ಶಾಸಕ ಹರೀಶ್ ಪೂಂಜ ಮುತುವರ್ಜಿ ವಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜತೆ ಮಾತನಾಡಿ ಕನಿಷ್ಠ ಶುಲ್ಕದಲ್ಲಿ ಸಂಪರ್ಕ ನೀಡಲು ಅನುಮತಿ ಕೊಡಿಸಿದರು. ಅದರಂತೆ ಉಪ್ಪಿನಂಗಡಿಯ ಮಹಾಲಿಂಗೇಶ್ವರ ಇಲೆಕ್ಟ್ರಿಕಲ್ ಗುತ್ತಿಗೆದಾರರು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಇದೀಗ ಉಷಾ ಅವರ ಮನೆಯಲ್ಲಿ ಎರಡು ವರ್ಷದ ಬಳಿಕ ಬೆಳಕು ಮೂಡಿದೆ.