ಉಡುಪಿಯ ಕುಂದಾಪುರದಲ್ಲಿ ನಡೆಯಲಿರುವ ವಂದೇ ಮಾತರಂ ಜನಜಾಗೃತಿ ಅಭಿಯಾನದ ಕರಪತ್ರವನ್ನು ಮಂಗಳೂರಿನಲ್ಲಿ ಮಟ್ಟಾರು ವಿಠ್ಠಲ್​ ಕಿಣಿ ಬಿಡುಗಡೆ ಮಾಡಿದರು. ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್​ ಚೌಟ, ಪೃಥ್ವಿರಾಜ್​ ಶೆಟ್ಟಿ ಹಾಗೂ ಪಕ್ಷದ ಮುಖಂಡರು ಇದ್ದರು. 
ಉಡುಪಿ

ರಾಷ್ಟ್ರಭಕ್ತರ ಮಂತ್ರ ವಂದೇ ಮಾತರಂ ಗೀತೆ

* ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲ್​ ಕಿಣಿ ಅಭಿಮತ

*

ಉಡುಪಿ: ವಂದೇ ಮಾತರಂ ಎಂದಾಗ ಇಡೀ ದೇಶವೇ ಎದ್ದು ನಿಲ್ಲಬೇಕು. ಏಕೆಂದರೆ, ಅದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ರಾಷ್ಟ್ರಭಕ್ತರ ಮಂತ್ರ. ವಂದೇ ಮಾತರಂ ಕುರಿತು ಜನಜಾಗೃತಿ ಅಭಿಯಾನ ಕೈಗೊಂಡಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರದ ಶಾಸಕ ಕಿರಣಕುಮಾರ್​ ಕೊಡ್ಗಿ ಅವರೊಂದಿಗೆ ನಾನೂ ಪಾಲ್ಗೊಳ್ಳುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್​ ಕಿಣಿ ತಿಳಿಸಿದರು.
ಮಂಗಳೂರಿನ ತಮ್ಮ ಮನೆಯಲ್ಲಿ ಕುಂದಾಪುರದಲ್ಲಿ ಸೆ.7ರಂದು ನಡೆಯಲಿರುವ ವಂದೇ ಮಾತರಂ ಜನಜಾಗೃತಿ ಅಭಿಯಾನ ಮತ್ತು ಕಾಲ್ನಡಿಗೆ ಜಾಥಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಐತಿಹಾಸಿಕ ದಾಖಲೆಯಾಗಲಿ

ವಂದೇ ಮಾತರಂ ಎನ್ನುವುದು ರಾಷ್ಟ್ರೀಯತೆಯ ಭಾವ. ಆ ಶಬ್ದದ ಉಚ್ಛಾರಣೆಯಿಂದ ರೋಮಾಂಚನ, ಮೈ-ಮನಗಳು ನವಿರೇಳುತ್ತವೆ. ಕುಂದಾಪುರದಲ್ಲಿ ನಡೆಯುವ ಕಾಲ್ನಡಿಗೆ ಜಾಥಾವು ರಾಷ್ಟ್ರಭಕ್ತರೆಲ್ಲರ ನೆರವಿನಿಂದ ಐತಿಹಾಸಿಕ ದಾಖಲೆ ನಿರ್ಮಿಸಲಿ ಎಂದು ವಿಠ್ಠಲ್​ ಕಿಣಿ ಹಾರೈಸಿದರು.

ಜಾಥಾಕ್ಕೆ ಇನ್ನಷ್ಟು ಸ್ಫೂರ್ತಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸೆ.7ರಂದು ಬೆಳಗ್ಗೆ 8:30ಕ್ಕೆ ಕುಂದಾಪುರದ ಹೊಸ ಬಸ್​ ನಿಲ್ದಾಣದಿಂದ ಜಾಥಾ ಆರಂಭಗೊಳ್ಳಲಿದೆ. ಸಂಜೆ 5ಕ್ಕೆ ಸಾಸ್ತಾನದ ಬಸ್​ ನಿಲ್ದಾಣದ ಬಳಿ ಸಮರೋಪ ಸಮಾರಂಭ ನಡೆಯಲಿದೆ. ವಂದೇ ಮಾತರಂ ಜನಜಾಗೃತಿ ಅಭಿಯಾನ ಮತ್ತು ಕಾಲ್ನಡಿಗೆ ಜಾಥಾದ ಕರಪತ್ರವನ್ನು 98 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್​ ಕಿಣಿ ಅವರು ಬಿಡುಗಡೆ ಮಾಡಿರುವುದು ನಮಗೆ ಇನ್ನಷ್ಟು ಸ್ಫೂರ್ತಿ ಹೆಚ್ಚಿಸಿದೆ ಎಂದರು.
ಮಂಗಳೂರು ಸಂಸದ ಬ್ರಿಜೇಶ್​ ಚೌಟ, ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್​ ಶೆಟ್ಟಿ, ಪಕ್ಷದ ಮುಖಂಡರಾದ ರಮೇಶ್​ ಕಂದೆಟ್ಟು ಇನ್ನಿತರರು ಉಪಸ್ಥಿತರಿದ್ದರು.