ಉಡುಪಿಯ ಗೀತಾಮಂದಿರದಲ್ಲಿ ವೀಣಾ ಬನ್ನಂಜೆ ಅವರನ್ನು ಸನ್ಮಾನಿಸಲಾಯಿತು. ವಿಶ್ವನಾಥ್​ ಶೆಣೈ, ಕೆ.ವಿ. ರಮಣ ಆಚಾರ್ಯ, ಆಸ್ಟ್ರೋ ಮೋಹನ್​, ಜನಾರ್ದನ್​ ಕೊಡವೂರು, ಪ್ರೊ. ಸದಾಶಿವ್​ ರಾವ್​, ರಾಜೇಶ್​ ಭಟ್​ ಪಣಿಯಾಡಿ, ಡಾ. ಎಂ.ಹರೀಶ್ಚಂದ್ರ, ರವಿರಾಜ್​ ಎಚ್​.ಪಿ., ಪೂರ್ಣಿಮಾ ಜನಾರ್ದನ್​ ಇತರರಿದ್ದರು. 
ಉಡುಪಿ

ಸಿನಿಮಾದಲ್ಲೂ ಗೋವಿಂದಾಚಾರ್ಯರ ಜೀವನ ದಾಖಲು

* ಪ್ರತಿಷ್ಠಾನದ ಮುಖ್ಯಸ್ಥೆ ವೀಣಾ ಬನ್ನಂಜೆ ಸಂತಸ 

* ಉಡುಪಿ ಗೀತಾ ಮಂದಿರದಲ್ಲಿ ಉಚಿತ ಪ್ರದರ್ಶನ

ಉಡುಪಿ: ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರವಚನ, ಕೃತಿಗಳ ಮೂಲಕ ಮನೆಮಾತಾದವರು. ಅವರ ವಿದ್ವತ್ತಿಗೆ ಎಂತಹವರೂ ಸಹ ತಲೆದೂಗುತ್ತಾರೆ. ಅಂತಹ ಮಹಾನ್​ ಸಾಧಕನ ಜೀವನವನ್ನು ಚಲನಚಿತ್ರ ಮಾಡಿರುವುದು ಸಾರ್ಥಕದ ಕ್ಷಣ ಎಂದು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಮುಖ್ಯಸ್ಥೆ ವೀಣಾ ಬನ್ನಂಜೆ ಸಂತಸ ವ್ಯಕ್ತಪಡಿಸಿದರು.
ಉಡುಪಿ ಪುತ್ತಿಗೆ ಮಠದ ಗೀತಾ ಮಂದಿರದ ನೃಸಿಂಹ ಸಭಾಂಗಣದಲ್ಲಿ ಪುತ್ತಿಗೆ ಶ್ರೀಗಳದ್ವಯರ ಆಶೀರ್ವಾದದೊಂದಿಗೆ ಗುರುವಾರ (ಸೆ.10) ಆಯೋಜಿಸಿದ್ದ ಬನ್ನಂಜೆ ಗೋವಿಂದಾಚಾರ್ಯರ ಜೀವನಾಧಾರಿತ 'ಇಂದು ಎನಗೆ ಗೋವಿಂದ' ಚಲನಚಿತ್ರದ ಉಚಿತ ಮೂರು ಪ್ರದರ್ಶನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬನ್ನಂಜೆ ಅಭಿಮಾನಿ ಬಳಗ, ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಚಲನಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ ಭಾಸ್ಕರ್​ ರಾವ್​ ಹಾಗೂ ವಿದ್ವಾನ್​ ಕೃಷ್ಣರಾಜ್​ ಭಟ್​ ಕುತ್ಪಾಡಿ ಅವರನ್ನು ಅಭಿನಂದಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್​ ಶೆಣೈ, ಗೀತಾ ಮಂದಿರದ ಪ್ರಭಾರಿ ಕೆ.ವಿ. ರಮಣ ಆಚಾರ್ಯ, ಬನ್ನಂಜೆ 90 ನಮನ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಆಸ್ಟ್ರೋ ಮೋಹನ್​, ಕಾರ್ಯದರ್ಶಿ ಜನಾರ್ದನ್​ ಕೊಡವೂರು, ಕೋಶಾಧಿಕಾರಿ ಪ್ರೊ. ಸದಾಶಿವ್​ ರಾವ್​, ರಾಜೇಶ್​ ಭಟ್​ ಪಣಿಯಾಡಿ, ಪಂಚಮಿ ಟ್ರಸ್ಟ್​ನ ಮುಖ್ಯಸ್ಥ ಡಾ. ಎಂ.ಹರೀಶ್ಚಂದ್ರ, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ., ಗೌರವ ಕಾರ್ಯದರ್ಶಿ ರಂಜಿನಿ ವಸಂತ್​, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್​, ದೀಪಾ ಕರ್ಕಿ, ಚಂದ್ರಕಾಂತ್​ ಇತರರು ಇದ್ದರು.
ಕಸಾಪ  ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್​ ಕಾರ್ಯಕ್ರಮ ನಿರ್ವಹಿಸಿದರು.