ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ಎಸ್.ಎಸ್. ಕಾದ್ರೊಳ್ಳಿ, ಡಾ. ಬಸವರಾಜ್ ಜಿ. ಹುಬ್ಬಳ್ಳಿ, ಡಾ. ಎಚ್.ಅಶೋಕ್, ಜ್ಯೋತ್ಸ್ನಾ ಬಿ.ಕೆ. ಇತರರಿದ್ದರು.
* ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ
* ಡಿಸಿ ಕಚೇರಿಯಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸಭೆ
ಉಡುಪಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 14 ವರ್ಷ ಪೂರ್ಣಗೊಂಡ ಬಾಲಕಿಯರಿಗಾಗಿ ರಾಷ್ಟ್ರೀಯ ಎಚ್ಪಿವಿ ಲಸಿಕಾ ಅಭಿಯಾನ ಆರಂಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಮಾ.13ರಂದು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಶುಕ್ರವಾರ (ಮಾ.6) ಆಯೋಜಿಸಿದ್ದ ಎಚ್ಪಿವಿ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, 14 ವರ್ಷ ಪೂರ್ಣಗೊಂಡ ಹಾಗೂ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು. ಇದರಿಂದ ಮಹಿಳೆಯರಲ್ಲಿ ಕ್ಯಾನ್ಸರ್ ತಡೆಗಟ್ಟಬಹುದು ಎಂದರು.
ಪಾಲಕರ ಒಪ್ಪಿಗೆ ಕಡ್ಡಾಯ
ಜಿಲ್ಲೆಯಲ್ಲಿ 11,274 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, 5 ಎಂಎಲ್ನ ಒಂದು ಡೋಸ್ ನೀಡಲಾಗುತ್ತಿದೆ. ಇದು ಸ್ವಯಂ ಪ್ರೇರಿತವಾಗಿದ್ದು ಪಾಲಕರ ಒಪ್ಪಿಗೆ ಕಡ್ಡಾಯವಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮೂರು ತಿಂಗಳ ಕಾಲ ಲಸಿಕೆ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿಪಂನ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ್ ಜಿ. ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್, ಆರ್ಸಿಎಚ್ ಅಧಿಕಾರಿ ಜ್ಯೋತ್ಸ್ನಾ ಬಿ.ಕೆ. ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯ ಬಸ್ ನಿಲ್ದಾಣ ಸಮೀಪದ ಬೋರ್ಡ್ ಶಾಲೆಯಲ್ಲಿ ಮಾ.13ರಂದು ಬೆಳಗ್ಗೆ 10:30ಕ್ಕೆ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡುವ ಮೂಲಕ ಅಭಿಯಾನದ ಉದ್ಘಾಟನೆ ನಡೆಯಲಿದೆ. ಫೆ.28ರಿಂದಲೇ ದೇಶಾದ್ಯಂತ ಅಭಿಯಾನ ಆರಂಭಗೊಂಡಿದ್ದು, ಲಸಿಕೆಯು ಶೇ.93ರಷ್ಟು ಪರಿಣಾಮಕಾರಿಯಾಗಿದೆ. ಅರ್ಹ ಹೆಣ್ಣುಮಕ್ಕಳು ಲಸಿಕೆ ಪಡೆಯುವಂತಾಗಲು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು.