ಗುಜರಾತ್ನ ವಡ್ ನಗರದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣಾ ಉಚಿತ ಶಿಬಿರವನ್ನು ಸೋಮ್ಭಾಯ್ ಮೋದಿ ಉದ್ಘಾಟಿಸಿದರು. ಡಾ. ಕೃಷ್ಣಪ್ರಸಾದ್ ಕೂಡ್ಲು, ಜೀತುಭಾಯ್ ಮೋದಿ, ಜಶುಭಾಯ್ ಚೌಧರಿ, ರಾಮ್ಜಿ ಭಾಯ್ ಚೌಧರಿ, ಡಾ. ದೀಪಕ್ ಪಟೇಲ್ ಇತರರಿದ್ದರು.
* ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ಕೂಡ್ಲು ಆಶಯ
* ಮೋದಿ ಜನ್ಮದಿನದ ನಿಮಿತ್ತ ಗುಜರಾತ್ನಲ್ಲಿ ಉಚಿತ ಶಿಬಿರ
ಉಡುಪಿ: ವ್ಯವಸ್ಥೆಯ ಕೊರತೆಯಿಂದಾಗಿ ಯಾರೂ ಸಹ ಕಣ್ಣಿನ ಚಿಕಿತ್ಸೆಯಿಂದ ವಂಚಿತರಾಗಬಾರದು. ದೃಷ್ಟಿ ಎನ್ನುವುದು ವಿಶೇಷಾಧಿಕಾರವಲ್ಲ. ಅದೊಂದು ಜೀವನದ ಅಗತ್ಯತೆ. ಅಂಧತ್ವದ ನಿವಾರಣೆಯಿಂದ ಕೋಟ್ಯಂತರ ಭಾರತೀಯರ ಶೈಕ್ಷಣಿಕ ಉನ್ನತಿ, ಉತ್ಪಾದಕತೆ ಹೆಚ್ಚಳ, ಗೌರವ, ಜೀವನಮಟ್ಟ ಹೆಚ್ಚಿಸಬಹುದಾಗಿದೆ. ಹೀಗಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ದೇಶಾದ್ಯಂತ ನೇತ್ರ ಚಿಕಿತ್ಸೆಗೆ ವಿಶೇಷ ಸೌಲಭ್ಯ, ಅವಕಾಶ ನೀಡಬೇಕಿದ್ದು ರಾಷ್ಟ್ರೀಯ ಆಂದೋಲನವಾಗಬೇಕಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ನ ಡಾ. ಕೃಷ್ಣಪ್ರಸಾದ್ ಕೂಡ್ಲು ಆಶಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ 76ನೇ ಜನ್ಮದಿನ ಹಾಗೂ ರಾಜಕೀಯ ಜೀವನದ 25 ವರ್ಷದ ನಿಮಿತ್ತ ಅವರ ಹುಟ್ಟೂರಾದ ಗುಜರಾತ್ ರಾಜ್ಯದ ವಡ್ ನಗರದಲ್ಲಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಗೂ ಸವೋರ್ದಯ ಸೇವಾ ಟ್ರಸ್ಟ್ ಆಹ್ಮದಾಬಾದ್, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಷನ್ ಬೆಂಗಳೂರು ಸಹಕಾರದಲ್ಲಿ ಗುರುವಾರ (ಸೆ.18) ಆಯೋಜಿಸಿದ್ದ ನೇತ್ರ ಉಚಿತ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಅಭಿನಂದನಾರ್ಹ ಸೇವೆ
ಪ್ರಧಾನಿ ಮೋದಿಯ ಸಹೋದರ ಪುತ್ರ, ಸವೋರ್ದಯ ಸೇವಾ ಟ್ರಸ್ಟ್ನ ಜೀತುಭಾಯ್ ಮೋದಿ ಮಾತನಾಡಿ, ಪ್ರಸಾದ್ ನೇತ್ರಾಲಯವು 6 ವರ್ಷದಿಂದ ನರೇಂದ್ರ ಮೋದಿ ಅವರ ಜನ್ಮದಿನದಂದು ನಡೆಸುತ್ತಿರುವ ನೇತ್ರ ಆರೋಗ್ಯ ಶಿಬಿರವು ಮಾದರಿ ಜನಸೇವೆಯಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದೂರದ ಉಡುಪಿಯಿಂದ ಗುಜರಾತ್ಗೆ ಬಂದು ಶಿಬಿರ ನಡೆಸುವುದು ಸಾಮಾನ್ಯ ಕೆಲಸವಲ್ಲ. ಅವರ ಈ ಶ್ರಮ ಅಭಿನಂದನಾರ್ಹ ಎಂದರು.
ವಡ್ ತಾಪಂ ಅಧ್ಯಕ್ಷ ಜಶುಭಾಯ್ ಚೌಧರಿ, ಎಪಿಎಂಸಿ ಅಧ್ಯಕ್ಷ ರಾಮ್ಜಿ ಭಾಯ್ ಚೌಧರಿ, ನೇತ್ರ ವಿಭಾಗ ಮುಖ್ಯಸ್ಥ ಡಾ. ದೀಪಕ್ ಪಟೇಲ್, ಜಿಎಂಇಆರ್ಎಸ್ ಮೆಡಿಕಲ್ ಕಾಲೇಜ್ನ ಸೂಪರಿಂಟೆಂಡೆಂಟ್ ಡಾ. ಸುನೀಲ್ ಓಝಾ, ಡಾ. ಮುಖೇಶ್ ವೋರಾ, ಡಾ. ರಸ್ಮಿನ್ ಕಲ್ಸ್ವಾ, ಡಾ. ಇಮ್ರೀನ್ ಬನ್ವಾ, ಜಿಲ್ಲಾ ಸಚಿವ ಕಮಲ್ಭಾಯ್ ಪಟೇಲ್, ಸಮಾಜ ಸೇವಕ ಗೋವಿಂದ್ಭಾಯ್ ಪರಮಾರ್, ಪಾರುಲ್ ಬೆನ್ ಓಝಾ ಪಾಲ್ಗೊಂಡಿದ್ದರು.
720 ಜನರ ತಪಾಸಣೆ, 534 ಮಂದಿಗೆ ಉಚಿತ ಕನ್ನಡಕ
ಪ್ರಧಾನಿ ಮೋದಿ ಅವರ ಹಿರಿಯ ಸಹೋದರ ಸೋಮ್ಭಾಯ್ ಮೋದಿ ಶಿಬಿರ ಉದ್ಘಾಟಿಸಿ, ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು. ವಿಸ್ನಗರದ ಜ್ಯೋತಿ ಹಾಸ್ಪಿಟಲ್ ಸಹಕಾರದಲ್ಲಿ ನೇತ್ರ ದಾನ, ಅಂಗಾಂಗ ದಾನ ವಾಗ್ದಾನ ಮತ್ತು ರಕ್ತದಾನ ಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ 720 ಜನರ ನೇತ್ರ ತಪಾಸಣೆ ನಡೆಸಲಾಯಿತು. 534 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 92 ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು.
ಜಗತ್ತು ಕಂಡಂತಹ ಅತಿ ವಿಶಿಷ್ಟ ನಾಯಕ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ಅವರ ಜನ್ಮದಿನದಂದು 6 ವರ್ಷದಿಂದ ನಮ್ಮ ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಗುಜರಾತ್ನ ಜನರಿಗೆ ನೇತ್ರ ಚಿಕಿತ್ಸಾ ಸೇವೆ ಮಾಡುತ್ತಿದ್ದೇವೆ. ಪ್ರಧಾನಿಯ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್' ಘೋಷಣೆಯಡಿ ನಾವೆಲ್ಲರೂ ಕಾರ್ಯತತ್ಪರರಾಗಬೇಕು.