ಕಾಸರಗೋಡು: ಪೊಲೀಸ್ ಎಂದು ಹೇಳಿಕೊಂಡು ಚಿನ್ನದಂಗಡಿಗೆ ಆಗಮಿಸಿದ ವ್ಯಕ್ತಿಯೊಬ್ಬ 2.65 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಘಟನೆ ಉದುಮದಲ್ಲಿ ನಡೆದಿದೆ.
ಉದುಮ ರೈಲ್ವೆ ಗೇಟ್ ಸಮೀಪದ ಚಿನ್ನದಂಗಡಿಗೆ ಎರಡು ಬಾರಿ ಬಂದಾತ ಒಟ್ಟು 12.600 ಗ್ರಾಂ ಚಿನ್ನಾಭರಣ ಖರೀದಿಸಿ ವಂಚಿಸಿರುವ ಬಗ್ಗೆ ಮಾಲೀಕ ಕೆ.ಗಣೇಶನ್ ಬೇಕಲ ಪೊಲೀಸರಿಗೆ ದೂರು ನೀಡಿದ್ದಾರೆ.
ತಿರುವನಂತಪುರ ನೆರಿಕ್ಕಲ್ ಮೂಕನ ನಿವಾಸಿ ಮನು ಎಂಬಾತ ವಂಚಿಸಿದ ಆರೋಪಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮೇ 26ರಂದು ಪೊಲೀಸ್ ಸೋಗಿನಲ್ಲಿ ಚಿನ್ನದಂಗಡಿಗೆ ಬಂದ ಆರೋಪಿ, ತಾನು ಕೊಲ್ಲಂ ನಿವಾಸಿ ಅವಿಲ್‌ರಾಜ್, ಬೇಕಲ ಠಾಣೆಯಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಎಂದು ಪರಿಚಯಿಸಿಕೊಂಡು ಸರ ಮತ್ತು ಉಂಗುರ ಸೇರಿದಂತೆ 1,29,500 ರೂ. ಮೌಲ್ಯದ ಚಿನ್ನ ಖರೀದಿಸಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಮೆಸೇಜನ್ನು ಅಂಗಡಿ ಮಾಲೀಕನಿಗೆ ತೋರಿಸಿ ತೆರಳಿದ್ದಾನೆ.
ಅದೇ ದಿನ ಸಂಜೆ ಮತ್ತೆ ಅದೇ ಚಿನ್ನದ ಅಂಗಡಿಗೆ ಬಂದ ಆತ 1,31,000 ರೂ. ಮೌಲ್ಯದ ಚಿನ್ನದ ಬ್ರೇಸ್ಲೆಟ್ ಖರೀದಿಸಿ ಹಣ ಕಳುಹಿಸಿದ ಮೆಸೇಜ್ ತೋರಿಸಿ ಕಾಲ್ಕಿತ್ತಿದ್ದಾನೆ. ಅಂಗಡಿ ಮಾಲೀಕ ಬ್ಯಾಂಕ್ ಸಂಪರ್ಕಿಸಿದಾಗ ಹಣ ಪಾವತಿಯಾಗಿಲ್ಲವೆಂದು ತಿಳಿದು, ಪೊಲೀಸರಿಗೆ ದೂರು ನೀಡಿದ್ದಾರೆ.