ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ ಪ್ರಕರಣದಲ್ಲಿ ಉಡುಪಿಯಲ್ಲಿ ಬಂಧಿತರಾದ ಆರೋಪಿಗಳು.
* ವೈದ್ಯ ಸೇರಿ ನಾಲ್ವರು ಬಂಧನ
* ಮುಂದುವರಿದ ಪೊಲೀಸ್ ತನಿಖೆ
ಉಡುಪಿ: ಆಗಸ್ಟೇ ಜನಿಸಿದ್ದ ಹೆಣ್ಣು ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಕಾನೂನಾತ್ಮಕವಾಗಿ ಯಾವುದೇ ಪ್ರಕ್ರಿಯೆ ನಡೆಸದೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವೈದ್ಯ, ಓರ್ವ ಮಹಿಳೆ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಉಡುಪಿ ಕಾಮತ್ ನರ್ಸಿಂಗ್ ಹೋಮ್ನ ವೈದ್ಯ, ಉಡುಪಿ ಬನ್ನಂಜೆಯ ಡಾ. ಕೆ.ಸುರೇಂದ್ರ ಕಾಮತ್ (76), ಮೂಡುತೋನ್ಸೆ ಗ್ರಾಮದ ನೇಜಾರು ಸಂತೆಕಟ್ಟೆಯ ರಾಜೀವನಗರದ ನಿವಾಸಿ ಎಸ್. ಪ್ರಕಾಶ್ (50), ಮಗುವನ್ನು ನೀಡಿದ ಪಾಲಕರಾದ ಕಾರ್ಕಳದ ಸಂಪತ್ ಎಸ್. ಸೂಡ (22), ಕಾರ್ಕಳದ ನಂದಳಿಕೆಯ ಸುಪ್ರೀತಿ ಎಸ್. (22) ಬಂಧಿತರು.
ಮಕ್ಕಳ ರಕ್ಷಣಾ ಘಟಕಕ್ಕೆ ದೂರು
ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಜೂ.19ರಂದು ದೂರವಾಣಿ ಕರೆ ಮಾಡಿ, ಉಡುಪಿ ತಾಲೂಕಿನ ಸಂತೆಕಟ್ಟೆ ನೇಜಾರಿನ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಎಂಬವರು ಹೆಣ್ಣು ಮಗುವನ್ನು ತಂದಿದ್ದು, ಯಾವುದೇ ಕಾನೂನಾತ್ಮಕ ಪ್ರಕ್ರಿಯೆ ಇಲ್ಲದೆ ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಉಡುಪಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಹಾಗೂ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಸದರಿ ದಂಪತಿ ವಾಸವಿದ್ದ ಸಂತೆಕಟ್ಟೆಯ ಸುಬ್ರಹ್ಮಣ್ಯ ನಗರದಲ್ಲಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳಿಲ್ಲದ ದಂಪತಿ
ಮನೆಯಲ್ಲಿ ಪೂರ್ಣಿಮಾ, ಎಸ್.ಪ್ರಕಾಶ್, 1 ತಿಂಗಳ ಹೆಣ್ಣು ಮಗು ಶ್ರೀನಿಕಾ ಪ್ರಕಾಶ್ ಹಾಗೂ ಪೂರ್ಣಿಮಾ ಅವರ ಅಕ್ಕ ಲಕ್ಷ್ಮೀ ಇದ್ದರು. ಅವರಲ್ಲಿ ಈ ಮಗು ಯಾರದ್ದೆಂದು ವಿಚಾರಣೆ ನಡೆಸಿದಾಗ ಸರಿಯಾಗಿ ಉತ್ತರ ನೀಡದೆ ಅನುಮಾನಾಸ್ಪದ ಹೇಳಿಕೆ ನೀಡಿದರು. ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಗೆ ಮದುವೆಯಾಗಿ 11 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಉಡುಪಿಯಲ್ಲಿರುವ ಕಾಮತ್ ನರ್ಸಿಂಗ್ ಹೋಮ್ನಲ್ಲಿ ಸಂತಾನಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ತಿಳಿದುಬಂತು.
ಜನನ ಪ್ರಮಾಣಪತ್ರ ಮಾಡಿಸಿಕೊಟ್ಟ ಡಾಕ್ಟರ್!
ಪೂರ್ಣಿಮಾಳ ಅಕ್ಕ ಲಕ್ಷ್ಮೀ ಅವರಿಗೆ ಸ್ನೇಹಿತರು ಉಡುಪಿಯ ಕಾಮತ್ ನರ್ಸಿಂಗ್ ಹೋಮ್ನಲ್ಲಿ ಮಗು ಇರುವ ವಿಚಾರ ತಿಳಿಸಿದ್ದರು. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಕಾಶ್ ದಂಪತಿ, ವೈದ್ಯ ಡಾ. ಕೆ.ಸುರೇಂದ್ರ ಕಾಮತ್ ಅವರಲ್ಲಿ ಆ ಮಗುವನ್ನು ತಮಗೆ ನೀಡುವಂತೆ ಕೇಳಿಕೊಂಡಿದ್ದರು. ಮಕ್ಕಳಿಲ್ಲದ ದಂಪತಿಗೆ ಆ ಮಗುವನ್ನು ಕೊಡಲು ಒಪ್ಪಿ 1 ತಿಂಗಳ ಹಿಂದೆಯೇ ಜನಿಸಿದ್ದ ಹೆಣ್ಣು ಮಗುವನ್ನು ಕೊಟ್ಟಿದ್ದರು. ಅಲ್ಲದೆ, ಆ ಮಗುವಿಗೆ ಜನನ ಪ್ರಮಾಣಪತ್ರವನ್ನೂ ಆಸ್ಪತ್ರೆ ವತಿಯಿಂದ ಮಾಡಿಸಿಕೊಟ್ಟಿದ್ದರು. ಬಳಿಕ ದಂಪತಿ, ಉಡುಪಿ ನಗರಸಭೆಯಲ್ಲಿ ಮಗುವಿನ ಜನನ ಪ್ರಮಾಣ ಪತ್ರ ಪಡೆದಿದ್ದರು. ಇದೀಗ ಮಗುವಿನ ಜೈವಿಕ ಪಾಲಕರು ಯಾರೆಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.
ಆರೋಪಿತರು ಅಕ್ರಮ ಲಾಭ ಗಳಿಸುವ ಸಮಾನ ಉದ್ದೇಶದಿಂದ ಒಳಸಂಚು ರೂಪಿಸಿ ಮಗುವಿನ ಜನನ ಪ್ರಮಾಣ ಹಾಗೂ ತಂದೆ-ತಾಯಿಯ ನಕಲಿ ದಾಖಲಾತಿ ಸೃಷ್ಟಿಸಿದ್ದಾರೆ. ಇದು ಮಗುವನ್ನು ಕಳ್ಳ ಸಾಗಾಣಿಕೆಯ ಮೂಲಕ ಮಾರಾಟ ಮಾಡಿರುವಂತಹ ಕೃತ್ಯವೇ ಆಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
— ಹರಿರಾಮ್ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.