ಉಡುಪಿ ಮಣಿಪಾಲದಲ್ಲಿ ಯುವಕನಿಗೆ ಹಲ್ಲೆ ನಡೆಸಿ ಪರಾರಿಯಾಗಿ ಬಂಧನಕ್ಕೊಳಗಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳು.
* ಯುವಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ
* ಬಂಧಿತರೆಲ್ಲರೂ ಶಿವಮೊಗ್ಗ ಜಿಲ್ಲೆ ಯುವಕರು
ಉಡುಪಿ: ಮಣಿಪಾಲದ ಹೋಟೆಲೊಂದರಲ್ಲಿ ಸ್ನೇಹಿತನೊಂದಿಗೆ ರಾತ್ರಿ ಊಟ ಮಾಡಿ ಬಳಿಕ ರಸ್ತೆ ದಾಟುತ್ತಿದ್ದ ವೇಳೆ ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಮಣಿಪಾಲ ಠಾಣೆ ಪೊಲೀಸರು ಮಂಗಳವಾರ (ಆ.4) ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿ ಕಲ್ಲಪನಕೆರೆಯ ಅಕ್ಷಯ್ ಎಸ್. ಆಮುರ್ಗಂ (21), ಶಿವಮೊಗ್ಗ ಪೇಟೆಯ ಹಾಲ್ಕೊಳ ನಿವಾಸಿ ಪುನೀತ್ ಎಸ್. (21), ಶಿವಮೊಗ್ಗ ಪುರ್ಲೆಯ ಮಂಜುನಾಥ ಬಡಾವಣೆ ನಿವಾಸಿ ಶಮಂತ್ ಕೆ.ಆರ್. (21), ಶಿವಮೊಗ್ಗ ವಿನೋಬಾನಗರದ ಯಶವಂತ್ ಬಿ.ಜೆ. (21) ಬಂಧಿತರು.
ಬಂಧನಕ್ಕೊಳಗಾಗಿರುವ ಯುವಕರೆಲ್ಲರೂ ನಿಟ್ಟೆಯ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೆಂದು ತನಿಖೆಯ ವೇಳೆ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಣಿಪಾಲ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್. ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿವರ
ಆ.2ರಂದು ರಾತ್ರಿ 11:50ಕ್ಕೆ ಉದ್ಯಾವರದ ಯಶ್ರಾಜ್ (22) ಎಂಬವರು ತನ್ನ ತಮ್ಮ ಪವನಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ಮಣಿಪಾಲದಲ್ಲಿ ಊಟ ಮಾಡಿ ವಾಪಾಸ್ ತೆರಳುತ್ತಿದ್ದರು. ಈ ವೇಳೆ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿನ ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಡೆಯಿಂದ ಪವನಕುಮಾರ್ ರಸ್ತೆ ದಾಟುತ್ತಿದ್ದನು.
ಈ ವೇಳೆ ಸ್ವಿಫ್ಟ್ ಡಿಸೈರ್ ಹಾಗೂ ಫೋರ್ಡ್ ಕಾರಿನಲ್ಲಿ ಬಂದಿದ್ದ ಅಕ್ಷಯ್, ಪುನೀತ್, ಶಮಂತ್ ಕೆ.ಆರ್. ಹಾಗೂ ಯಶವಂತ್ ಎಂಬವರು ಪವನಕುಮಾರ್ನನ್ನು ತಡೆದು ನಿಲ್ಲಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಕಾಲಿನಿಂದ ತುಳಿದು, ಮೆಟಲ್ ಪಂಚ್ನಿಂದ ಆತನ ಮುಖಕ್ಕೆ ಗುದ್ದಿ,ಮೂಗಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದ್ದರು.
ಹಲ್ಲೆ ತಡೆಯಲು ಯತ್ನಿಸಿದ ಸಹೋದರ ಹಾಗೂ ಆತನ ಸ್ನೇಹಿತ ಶ್ರೇಯಸ್ ಅವರಿಗೂ ಕಾಲಿನಿಂದ ತುಳಿದು, ಬಟ್ಟೆಗಳನ್ನು ಹರಿದು, ಜೀವ ಬೆದರಿಕೆ ಹಾಕಿ ಕಾರಿನಲ್ಲಿ ಹೊರಟುಹೋಗಿದ್ದರು. ಘಟನೆ ಕುರಿತು ಯಶ್ರಾಜ್ ದೂರು ನೀಡಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.