ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಉದ್ಘಾಟಿಸಿದರು.
ಉಡುಪಿ: ಜವಾಬ್ದಾರಿಯುತ ಮನುಷ್ಯರಿಗೆ ಒತ್ತಡವೂ ಇರುತ್ತದೆ. ಆದರೆ ಮನಸ್ಸನ್ನು ನಿಗ್ರಹ ಮಾಡಿದರೆ ಸಕಲ ಸಾಧನೆ ಸಾಧ್ಯವಿದೆ. ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಎಲ್ಲವೂ ಒಳಿತಾಗುತ್ತದೆ ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಸೇವಾ ಬಳಗ ಹಾಗೂ ಅದಮಾರು ಮಠದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕರ ದಿನಾಚರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಒಳ್ಳೆಯದು ಮತ್ತು ಕೆಡುಕು ಎರಡೂ ಇರುತ್ತದೆ. ನಾವು ಉತ್ತಮವಾಗಿರುವುದನ್ನೇ ಆರಿಸಿಕೊಳ್ಳಬೇಕು. ಮನಸ್ಸು ಗೆದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಮಾದಕ ದ್ರವ್ಯ ವಿರೋಧಿ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಟಿ.ಎಂ.ಎ ಪೈ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್, ವ್ಯಸನಗಳಿಂದ ಒತ್ತಡವನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಮಾದಕ ದ್ರವ್ಯಗಳ ನಶೆ ಕ್ಷಣಿಕವಾಗಿರುತ್ತದೆ. ಆದರೆ ಅದರ ದುಷ್ಪರಿಣಾಮ ದೀರ್ವಾಗಿರುತ್ತದೆ. ಮನುಷ್ಯನನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತದೆ. ಒತ್ತಡವಿಲ್ಲದೆ ಮನುಷ್ಯ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಮನಸ್ಸನ್ನು ನಿಯಂತ್ರಿಸಿಕೊಂಡು ಸಾಧನೆಯನ್ನು ಮಾಡಬೇಕು. ಜೀವನದ ಕವಲು ದಾರಿಯಲ್ಲಿ ಸನ್ಮಾರ್ಗ ತೋರಿಸುವವನೇ ನೈಜ ಸ್ನೇಹಿತ. ಹೀಗಾಗಿ ಉತ್ತಮ ಸ್ನೇಹಿತರನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಿ.ಸಿ.ಎಂ.ಸಿ. ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಸಿಎ ಪ್ರಶಾಂತ್ ಹೊಳ್ಳ, ಸರ್ಕಲ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಪ್ರಾಂಶುಪಾಲ ಡಾ. ರಾಮು ಎಲ್., ಪಿಯುಸಿ ಪ್ರಾಂಶುಪಾಲ ಸಿ. ಸುರೇಶ್ ತುಂಗಾ, ಆಯೋಜಕರಾದ ಡಾ. ಚಂದ್ರಕಾಂತ್ ಭಟ್, ಡಾ. ಪಿ.ಎಸ್. ಐತಾಳ್ ಮೊದಲಾದವರು ಉಪಸ್ಥಿತರಿದ್ದರು. ಗೋವಿಂದರಾಜ್ ಸ್ವಾಗತಿಸಿದರು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ದೇಶದ ಭವಿಷ್ಯ. ಮಾದಕದ್ರವ್ಯ ವ್ಯಸನ ಸಾಮಾಜಿಕ ಪಿಡುಗು. ಇದರ ಮೂಲಕ ದೇಶದ ಯುವಸಂಪತ್ತಿನ ಶಕ್ತಿ ಣಿಸುವಂತೆ ಮಾಡುವ ಹುನ್ನಾರ ನಡೆಯುತ್ತಿದೆ. ನಶೆಗಾಗಿ ಮಾದಕದ್ರವ್ಯ ಸೇವಿಸಿದರೆ ನಂತರ ಅದೇ ನಮ್ಮನ್ನು ಬಲಿಪಡೆಯುತ್ತದೆ ಎಂಬ ಅರಿವು ಅಗತ್ಯ. ಈ ಆಪತ್ತು ಎದುರಿಸಲು ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಅವಶ್ಯ.
— ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ.