ಸುಳ್ಯ ತಾಲೂಕುಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ವಿಶೇಷ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಜಿತ್ ಪರಾಗ್ ಡೊಂಗ್ರೆ, ತಹಸೀಲ್ದಾರ್ ಮಂಜುಳಾ, ಎಸಿಎಫ್ ಪ್ರಶಾಂತ್ ಕುಮಾರ್ ಪೈ ಮೊದಲಾದವರಿದ್ದರು.  
ಉಡುಪಿ

ಮರಳು, ಕೆಂಪುಕಲ್ಲು ಪೂರೈಕೆಗೆ ಸಮಗ್ರ ನೀತಿ ರೂಪಿಸಿ

ಸುಳ್ಯ: ಜನಸಾಮಾನ್ಯರಿಗೆ ಮನೆ ಕಟ್ಟಲು ಕೆಂಪುಕಲ್ಲು, ಮರಳು ದೊರೆಯದ ಸಮಸ್ಯೆಯಾಗುತ್ತಿದೆ. ಇದಕ್ಕೆ ಸಮಗ್ರ ಕಾನೂನು ರೂಪಿಸಿ ಮರಳು, ಕೆಂಪುಕಲ್ಲು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸುಳ್ಯ ತಾಲೂಕುಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ವಿಶೇಷ ಸಭೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಚನಿಯ ಕಲ್ತಡ್ಕ, ಸಮಗ್ರ ಮರಳು ನೀತಿ ರೂಪಿಸಬೇಕೆಂದು ಆಗ್ರಹಿಸಿದರು. ಸುಳ್ಯದ ಅಂಬೇಡ್ಕರ್ ಭವನ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಶೀಘ್ರ ಪೂರ್ಣಗೊಳಿಸಬೇಕು ಎಂದು ನಂದರಾಜ ಸಂಕೇಶ ಹೇಳಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಗ್ರಾಮಗಳಲ್ಲಿ ಪ್ಲಾಟಿಂಗ್ ಆಗದೆ ಸಮಸ್ಯೆಯಾಗಿದೆ ಎಂದು ದೇವಪ್ಪ ನಾಯ್ಕ ಸಭೆಯ ಗಮನಕ್ಕೆ ತಂದರು. ಭಾಗಶಃ ಅರಣ್ಯ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಅರಣ್ಯ ಮತ್ತು ಕಂದಾಯ ಇಲಾಖೆಯ ಜಾಗದ ಸರ್ವೇ ಮಾಡಿ ಗಡಿ ಗುರುತು ಮಾಡಲಾಗುತ್ತಿದೆ. ಸಮಸ್ಯೆ ಪರಿಹರಿಸಿ ಆದ್ಯತೆಯ ಮೇರೆಗೆ 94ಸಿ ಮತ್ತಿತರ ಹಕ್ಕುಪತ್ರ ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಕ್ಕುಪತ್ರ ಸಿಕ್ಕಿಲ್ಲ

ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ 48 ಪರಿಶಿಷ್ಟ ಜಾತಿ ಕುಟುಂಬಕ್ಕೆ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದು ಅಚ್ಯುತ ಗುತ್ತಿಗಾರು ಹೇಳಿದರು. ಈ ಬಗ್ಗೆ ಪರಿಶೀಲಿಸುವಂತೆ ತಹಸೀಲ್ದಾರ್‌ಗೆ ಡಿಸಿ ಸೂಚಿಸಿದರು.
ಪ್ರಮುಖರಾದ ಸೀತಾನಂದ ಬೇರ್ಪಡ್ಕ, ಸಂಜಯ ಕುಮರ್ ಪೈಚಾರ್, ಬಾಬು ಕೆ.ಎಂ.ಜಾಲ್ಸೂರು, ವಿಜಯ ಆಲಡ್ಕ, ಗಿರಿಧರ ನಾಯ್ಕ, ಶಂಕರ್ ಪೆರಾಜೆ, ಮಹೇಶ್ ಬೆಳ್ಳಾರ್ಕರ್, ಸರಸ್ವತಿ ಬೊಳಿಯಮಜಲು, ಭೋಜಪ್ಪ ನಾಯ್ಕ, ಬಾಲಕೃಷ್ಣ ನಾಯ್ಕ ಅಜ್ಜಾವರ, ಗೋಪಾಲ ನಾಯ್ಕ, ಪುಟ್ಟಣ್ಣ, ಹರೀಶ್ ಮತ್ತಿತರರು ವಿವಿಧ ಅಹವಾಲು ಮಂಡಿಸಿದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಜಿತ್ ಪರಾಗ್ ಡೊಂಗ್ರೆ, ತಹಸೀಲ್ದಾರ್ ಮಂಜುಳಾ, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಉಪವಿಭಾಗ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ., ತಾಪಂ ಇಒ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಡಿಸಿ ಮನ್ನಾ ಭೂಮಿ ಒತ್ತುವರಿ ತೆರವು

ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಡಿಸಿ ಮನ್ನಾ ಭೂಮಿ ಒತ್ತುವರಿ ಆಗಿದೆ. ಡಿಸಿ ಮನ್ನಾ ಭೂಮಿಯಲ್ಲಿ ಕೆಲವೆಡೆ ಸರ್ಕಾರಿ ಕಚೇರಿಗಳೂ ನಿರ್ಮಾಣವಾಗಿವೆ ಎಂದು ಅಚ್ಯುತ ಮಲ್ಕಜೆ, ಚಂದ್ರಶೇಖರ ಪಲ್ಲತ್ತಡ್ಕ ಮತ್ತಿತರ ಮುಖಂಡರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ಯಾರಾದರೂ ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಉದ್ದೇಶಕ್ಕೆ ಬಳಸಿದ್ದರೆ ಬದಲಿ ಭೂಮಿ ಕಾಯ್ದಿರಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ವಿವಿಧ ಅಹವಾಲು ಸಲ್ಲಿಕೆ

ಮಂಗ ಮತ್ತಿತರ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದೆ. ಇವುಗಳನ್ನು ಓಡಿಸಲು ಕೋವಿ ಪರವಾನಗಿ ನೀಡಬೇಕೆಂಬ ಬೇಡಿಕೆ ಕೇಳಿ ಬಂತು. ಈ ಬಗ್ಗೆ ಅರಣ್ಯಾಧಿಕಾರಿಗಳಿಂದ ವರದಿ ಪಡೆದು ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಡಿಸಿ ಸೂಚಿಸಿದರು. ವಿದ್ಯುತ್ ಕಡಿತವಾದರೆ ಬಿಎಸ್‌ಎನ್‌ಎಲ್ ಟವರ್ ಸ್ಥಗಿತಗೊಂಡು ನೆಟ್‌ವರ್ಕ್ ಹೋಗುತ್ತದೆ. ನಗರ ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದೆ. ಸುಳ್ಯ ನಗರದ ಮೀನು ಮಾರುಕಟ್ಟೆ ಏಲಂ ಆಗದೆ ನಗರ ಪಂಚಾಯಿತಿಗೆ ನಷ್ಟವಾಗುತ್ತಿದೆ. ನಗರದ ಚರಂಡಿ, ರಸ್ತೆ ದುರಸ್ತಿ ಮಾಡಿಲ್ಲ ಇತ್ಯಾದಿ ಅಹವಾಲುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.