ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಅಫಘಾತ.
ಉಡುಪಿ: ಸಾಣೂರು ಗ್ರಾಮದ ಬಳಿ ಕಾರ್ಕಳ-ಮೂಡುಬಿದಿರೆ ರಸ್ತೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಅಫಘಾತ ಸಂಭವಿಸಿದ್ದು, ಆಪ್ತ ಸಹಾಯಕ ಗಂಭೀರಗಾಯಗೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ ರಮಾನಾಥ ರೈ ಅವರು ತಮ್ಮ ಇನ್ನೋವಾ ಕಾರಿನಲ್ಲಿ ತಮ್ಮ ಆಪ್ತ ಸಹಾಯಕ ಡೆನ್ಜಿಲ್, ಹಾಗೂ ಗನ್ ಮ್ಯಾನ್ ಜೊತೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಪಿಎ ಡೆನ್ಜೆಲ್ ಅವರ ಬಲಗಾಲು ಮುರಿದಿದ್ದು, ಚಿಕಿತ್ಸೆಗಾಗಿ ಕಾರ್ಕಳದ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿನ ಯೇನಪೋಯಾ ಸ್ಪೆಶಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಘಟನೆಯಲ್ಲಿ ರಮಾನಾಥ ರೈ ಹಾಗೂ ಗನ್ ಮ್ಯಾನ್ ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.