ಅಕ್ಷಯ ದೇವಾಡಿಗ 
ಉಡುಪಿ

ಮಾಜಿ ಡಾಟಾ ಎಂಟ್ರಿ ಆಪರೇಟರ್ ಬಂಧನ

ಇಂದಿರಾ ಎನ್ ಕೆ
ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಕಬಳಿಸಲು ಯತ್ನಿಸಿದ ಆರೋಪದ ಮೇಲೆ ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್ ಅಕ್ಷಯ ದೇವಾಡಿಗ(29) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ದೇವಸ್ಥಾನದಲ್ಲಿ 2022ರ ಡಿ.1ರಿಂದ 2026ರ ಮೇ 7ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದನು. ಇಲಾಖಾ ಲೆಕ್ಕ ಪರಿಶೋಧನೆ ಸಂದರ್ಭ ಕರ್ತವ್ಯ ಲೋಪ ಮತ್ತು ಆರ್ಥಿಕ ಅಕ್ರಮ ಬೆಳಕಿಗೆ ಬಂದಿತ್ತು. ಬಳಿಕ ಈತ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ನಾಪತ್ತೆಯಾಗಿದ್ದನು.
ದೇವಸ್ಥಾನ ಸಮಿತಿ ಅಧ್ಯಕ್ಷರ ಗಮನಕ್ಕೆ ತಾರದೆ, ಅವರ ಸಹಿಯನ್ನು ನಕಲಿ ವಾಡಿ ಆರೋಪಿ ಹಣವನ್ನು ದೋಚಲು ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.