ಬೆಳ್ತಂಗಡಿ: ದಿಡುಪೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಲಪಾತ ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕದ ಡಿಜಿಟಲ್ ರಸೀದಿ ವಿಚಾರವಾಗಿ ವಾಗ್ವಾದ ನಡೆದು ಅರಣ್ಯ ವಾಚರ್‌ಗೆ ಹಲ್ಲೆಗೈದು ಹಣ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುತ್ತಿಗೆ ವಾಚರ್ ಗೋಪಾಲ(42) ಜಲಪಾತದಲ್ಲಿ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು. ಜು.19ರಂದು ಮಧ್ಯಾಹ್ನ ವೇಳೆಗೆ 15 ಕೆಲ ಯುವಕರು ಜಲಪಾತಕ್ಕೆ ಆಗಮಿಸಿದ್ದು, ಇಲಾಖೆ ನಿಯಮದಂತೆ ತಲಾ 200 ರೂ.ನಂತೆ ಒಟ್ಟು 3 ಸಾವಿರ ರೂ. ನಗದು ಪಡೆದು ಕೈಬರಹದ ರಸೀದಿ ನೀಡಲಾಗಿತ್ತು. ಜಲಪಾತ ವೀಕ್ಷಿಸಿ ಬಂದ ತಂಡ ಡಿಜಿಟಲ್ ರಸೀದಿ ನೀಡುವಂತೆ ಒತ್ತಾಯಿಸಿದೆ.
ಆ ವೇಳೆ ಡಿಜಿಟಲ್ ರಸೀದಿ ಯಂತ್ರ ಕಾರ್ಯನಿರ್ವಹಿಸದ ಬಗ್ಗೆ ಗೋಪಾಲ ವಿವರಿಸಿದರೂ ಯುವಕರು ತಕರಾರು ಮುಂದುವರಿಸಿದ್ದಾರೆ. ಈ ವೇಳೆ ಪ್ರತಾಪ್ ಬನ್ಕಲ್ ಎಂಬಾತ ಗೋಪಾಲ ಅವರನ್ನು ತಡೆದು ನಿಲ್ಲಿಸಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಿ ಹಲ್ಲೆಗೈದು 50,500 ರೂ. ನಗದು ಹೊಂದಿದ್ದ ಬ್ಯಾಗ್ ಕಸಿದು ಇತರರೊಂದಿಗೆ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಬನ್ಕಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.