ಭೂಮಿ ಕಳೆದುಕೊಳ್ಳಲಿರುವ ನಿವಾಸಿಗಳು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಶಕಗಳಿಂದ ಕೃಷಿ ವಾಡಿಕೊಂಡು, ಮನೆ ನಿರ್ಮಿಸಿಕೊಂಡು ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ಜಾಗ ಇದೀಗ ಅರಣ್ಯ ಇಲಾಖೆಗೆ ಸೇರಿದೆ ಎಂಬ ನೋಟಿಸ್ ಬಂದಿರುವುದು ಕಡಿರುದ್ಯಾವರ ಗ್ರಾಮದ ಬೊಳ್ಳೂರುಬೈಲ್ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಬೊಳ್ಳೂರುಬೈಲ್‌ನಲ್ಲಿ 35ಕ್ಕೂ ಅಧಿಕ ಕುಟುಂಬಗಳು ಹಲವು ದಶಕಗಳಿಂದ ವಾಸವಾಗಿದ್ದು, ಕೃಷಿಯನ್ನೇ ಪ್ರಮುಖ ಜೀವನಾಧಾರವನ್ನಾಗಿಸಿಕೊಂಡಿವೆ. ಇಲ್ಲಿನ ಕೆಲವು ನಿವಾಸಿಗಳಿಗೆ 1979ರಲ್ಲೇ ಹಕ್ಕುಪತ್ರ ದೊರೆತಿದೆ. ಬಳಿಕ 1989ರಲ್ಲಿ ಕೆಲವರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾರಣದಿಂದ ಹಕ್ಕುಪತ್ರ ದೊರೆತಿಲ್ಲ. ಇದೀಗ ಆರಂಭಿಕ ಹಂತದಲ್ಲಿ ಏಳು ಮನೆಗಳಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಅತಿಕ್ರಮಿಸಿರುವ ಅರಣ್ಯ ಭೂಮಿಯನ್ನು ಏಕೆ ತೆರವುಗೊಳಿಸಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದೆ.
ಆಗಸ್ಟ್‌ನಲ್ಲಿ ಎರಡನೇ ಹಂತದ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ನಿವಾಸಿಗಳು ಅರಣ್ಯ ಇಲಾಖೆಯ ಕಚೇರಿಗೆ ತೆರಳಿದರೂ ಅಧಿಕಾರಿಗಳು ಬೇರೆ ಕೆಲಸದ ನೆಪ ಹೇಳಿ ವಿಚಾರಣೆ ನಡೆಸದೆ ವಾಪಸ್ ಕಳುಹಿಸಿದ್ದರು ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕೃಷಿ ಭೂಮಿಯೇ ಬದುಕಿನ ಆಧಾರ
ಒಂದು ಕಾಲದಲ್ಲಿ ಭತ್ತ ಹಾಗೂ ತರಕಾರಿ ಕೃಷಿ ವಾಡುತ್ತಿದ್ದ ಕುಟುಂಬಗಳು ವರ್ಷಗಳು ಕಳೆದಂತೆ ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿವೆ. ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಈ ಕುಟುಂಬಗಳಿಗೆ ಕೃಷಿ ಕೇವಲ ಆದಾಯದ ಮೂಲವಲ್ಲದೆ ಅವರ ಬದುಕಿಗೆ ಆಧಾರವಾಗಿದೆ. ತಲೆತಲಾಂತರಗಳಿಂದ ಕೃಷಿ ವಾಡಿಕೊಂಡು ಬಂದ ಭೂಮಿಯನ್ನು ತೆರವು ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿರುವುದು ಕುಟುಂಬಗಳನ್ನು ಕಂಗಾಲಾಗಿಸಿದೆ.
ಕಾನೂನು ಹೋರಾಟಕ್ಕೆ ಸಿದ್ಧತೆ
ತಲೆತಲಾಂತರಗಳಿಂದ ಕೃಷಿ ವಾಡಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಅರಣ್ಯ ಭೂಮಿ ಎಂಬ ಕಾರಣ ನೀಡಿ ಏಕಾಏಕಿ ತೆರವುಗೊಳಿಸುವ ಕ್ರಮದಿಂದ ವಷರ್ಗಳ ಪರಿಶ್ರಮದಿಂದ ಕಟ್ಟಿಕೊಂಡ ಬದುಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸದ್ಯ ನೋಟಿಸ್‌ಗೆ ಉತ್ತರ ನೀಡಲು ಹಾಗೂ ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಇರುವ ದಾಖಲೆಗಳೊಂದಿಗೆ ವಾದವನ್ನು ಇಲಾಖೆಯ ಮುಂದೆ ಮಂಡಿಸಲು ನಿವಾಸಿಗಳು ನಿರ್ಧರಿಸಿದ್ದಾರೆ. ಭೂಮಿ ಬಿಟ್ಟುಕೊಡಲೇಬೇಕಾದ ಪರಿಸ್ಥಿತಿ ಎದುರಾದರೆ ತಮ್ಮ ಹಕ್ಕಿಗಾಗಿ ಕಾನೂನು ಹೋರಾಟ ನಡೆಸುವುದಾಗಿಯೂ ನಿವಾಸಿಗಳು ತಿಳಿಸಿದ್ದಾರೆ.
ನಮ್ಮ ಹಿರಿಯರು ಕಷ್ಟಪಟ್ಟು ಈ ಭೂಮಿಯಲ್ಲಿ ಕೃಷಿ ವಾಡಿಕೊಂಡು ಜೀವನ ನಡೆಸಿದ್ದಾರೆ. ನಮ್ಮ ಬದುಕಿಗೂ ಕೃಷಿಯೇ ಆಧಾರ. ಹೀಗಾಗಿ ನಮ್ಮ ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆ ನಮಗೆ ನ್ಯಾಯ ಒದಗಿಸಬೇಕು.