ಖಾದರ್ ತೋಟದಲ್ಲಿರುವ ಬೃಹತ್ ರಂಬೂಟನ್ ಮರಗಳು 
ಉಡುಪಿ

ವಿದೇಶಿ ಹಣ್ಣುಗಳ ತೋಟ!

ಇಂದಿರಾ ಎನ್ ಕೆ
ಅನ್ಸಾರ್ ಇನೊಳಿ ಉಳ್ಳಾಲ
ಕಣ್ಮನ ತನಿಸುವ ವಿವಿಧ ಬಗೆಯ 50ಕ್ಕೂ ಅಧಿಕ ಹಣ್ಣುಗಳು, ಅದರಲ್ಲೂ ವಿದೇಶಿ ಹಣ್ಣುಗಳ ದರ್ಬಾರ್, ಜತೆಗೆ ಸ್ಥಳೀಯ ಬೆಳೆಗಳ ಸಂಗಮ. ಕೇವಲ ತೆಂಗು, ಅಡಿಕೆಯನ್ನೇ ನಂಬದೆ ಸಮಗ್ರ ಬೆಳೆಗೆ ಆದ್ಯತೆ ನೀಡಿ ಶ್ರಮಪಟ್ಟ ಫಲ ಕೃಷಿಕನಿಗೆ ಲಭಿಸಿದೆ. ಇದು ಇರಾ ಗ್ರಾಮದ ಕೃಷಿಕರೊಬ್ಬರ ಸಾಹಸಗಾಥೆ!
ಇರಾ ಸಣ್ಣಬೈಲ್ ನಿವಾಸಿ ಅಬ್ದುಲ್ ಖಾದರ್ ಹಿಂದೆ ತೆಂಗು, ಕಂಗು, ಬಾಳೆ ಮುಂತಾದ ಕೃಷಿ ಮಾಡುತ್ತಿದ್ದರು. ಆದರೆ ಯಾವ ಬೆಳೆಗೆ ಹೆಚ್ಚು ಬೇಡಿಕೆ ಇರುತ್ತದೋ ಆ ಬೆಳೆಯನ್ನು ಕೃಷಿಕರು ಬೆಳೆಯುವ ಮೂಲಕ ಬೇಡಿಕೆ ಕಡಿಮೆಯಾಗುತ್ತಾ ಬರುವುದರಿಂದ ಹಾಗೂ ವಿವಿಧ ರೋಗಗಳಿಂದ ಆಗುತ್ತಿದ್ದ ನಷ್ಟದ ಹಿನ್ನೆಲೆಯಲ್ಲಿ ಸಮಗ್ರ ಕೃಷಿಗೆ ಆದ್ಯತೆ ನೀಡಲು ಮುಂದಾದರು. ಇದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಕರಾವಳಿಯಲ್ಲಿ ಅಪರೂಪವಾಗಿದ್ದ ವಿದೇಶಿ ಹಣ್ಣುಗಳನ್ನು.
ಕೇರಳಕ್ಕೆ ತೆರಳಿ ರಂಬುಟಾನ್, ಮ್ಯಾಂಗೊಸ್ಟಿನ್, ಅಬೀವ್, ಡ್ರ್ಯಾಗನ್, ವರ್ಷವಿಡೀ ಆಗುವ ಬ್ರೆಝಿಲ್‌ನ ಜಬೊಟಿಕಾಬ (ಮರದ್ರಾಕ್ಷಿ), ಹೈಬ್ರೀಡ್ ಅಂಬಡೆ, ವಾಟರ್ ಆಪಲ್, ಥೈಲ್ಯಾಂಡ್‌ನ ಬ್ಲ್ಯಾಕ್ ಸುರಿನಾಮ್ ಚೆರಿ, ಜಗತ್ತಿನಲ್ಲೇ ಅತ್ಯಂತ ಚಿಕ್ಕದಾದ ಥೈವಾನ್ ಪೇರಳೆ, ಲಿಂಬೆ, ಮೂಸಂಬಿ, ದಕ್ಷಿಣ ಅಮೆರಿಕದ ಜ್ಯೂಸ್ ಅರಝಾಬಾಯಿ, ಥೈವಾನ್‌ನ ವೆರಿಕೇಟ್ ಪೇರಳೆ, ಕೆಂಪು ಬಣ್ಣದ ಸಿಂಧೂರ್ ಹಲಸು, ಥೈಲ್ಯಾಂಡ್ ಲೋಂಗನ್ ವೈಟ್, ರೂಬಿ, ಪಿಂಗ್ ಪಾಂಗ್, ಫೋರ್ ಸೀಝನ್, ಡಬ್ಬಲ್ ಲೋಂಗನ್, ಥೈಲ್ಯಾಂಡ್ ಮಟೋವಾ ಸಹಿತ 50ಕ್ಕೂ ಅಧಿಕ ಹಣ್ಣುಗಳ ಗಿಡಗಳನ್ನು ನೆಟ್ಟು ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಅದರ ಜತೆ ಜೇನುಕೃಷಿ, ತೆಂಗು, ಬಾಳೆ ಕೊಕ್ಕೋ, ಕಾಳುಮೆಣಸು, ವಿವಿಧ ಬಗೆಯ ಸ್ಥಳೀಯ ತರಕಾರಿ, ಹಣ್ಣು, ಹೂವಿನ ಗಿಡಗಳಿಗೂ ಆದ್ಯತೆ ನೀಡಿದ್ದಾರೆ. ರಬ್ಬರ್ ಬೆಳೆಗೂ ಇವರ ತೋಟದಲ್ಲಿ ಆದ್ಯತೆ ನೀಡಲಾಗಿದೆ. ಹತ್ತು ವರ್ಷಗಳ ಹಿಂದೆ ಕೈಹಾಕಿದ ವಿಭಿನ್ನ ಸಾಹಸ ಫಲ ನೀಡಿರುವ ಸಂತೃಪ್ತಿ ಇವರದ್ದು. ರಂಬುಟಾನ್ ಮತ್ತು ಮ್ಯಾಂಗೋಸ್ಟಿನ್ ಹಣ್ಣುಗಳ ಬೃಹತ್ ಮರಗಳು ಇವರ ತೋಟದಲ್ಲಿ ಕಾಣಲು ಸಿಗುತ್ತವೆ.
ಕೃಷಿಗೆ ಸಂಬಂಧಿಸಿದ ಯಾವುದೇ ಮೇಳ, ಉತ್ಸವಗಳಿದ್ದರೂ ಇವರ ತೋಟದಲ್ಲಿ ಬೆಳೆದ ಹಣ್ಣು, ಗಿಡಗಳ ಮಾರಾಟ ಮತ್ತು ಮಾಹಿತಿ ನೀಡುವ ವ್ಯವಸ್ಥೆ ಇರುತ್ತದೆ. ಕರಾವಳಿಯ ವಾತಾವರಣಕ್ಕೆ ಒಗ್ಗಿಕೊಳ್ಳದು ಎಂದು ಹೇಳಲ್ಪಟ್ಟ ಹಣ್ಣುಗಳ ಕೃಷಿ ಮಾಡುವ ಮೂಲಕ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ ಅಬ್ದುಲ್ ಖಾದರ್.

ಯಾವುದೇ ಉದ್ಯೋಗ ಹಣ ಮಾಡಬಹುದು, ಆದರೆ ಮಣ್ಣಿನ ಬೆಳೆ ಇಲ್ಲದೆ ಜೀವನ ಅಸಾಧ್ಯ. ಒಂದೇ ಬಗೆಯಿಂದ ಕೃಷಿಯಿಂದ ಜೀವನ ಕಷ್ಟ, ಯಾವುದಕ್ಕೆ ಬೆಲೆ ಹೆಚ್ಚಾಯಿತೋ ಅದನ್ನೇ ಬೆಳೆಸಿದರೆ ಬೇಡಿಕೆಯೂ ಕಡಿಮೆಯಾಗಿ ಸಮತೋಲನ ತಪ್ಪಿ ರೋಗಗಳೂ ಬರುತ್ತವೆ. ಈಗಾಗಲೇ ಅಡಕೆ ಬೆಲೆ ಏರಿಳಿತ ಕಾಣುತ್ತಿದ್ದು ಮುಂದೆ ಕರಾಳ ದಿನಗಳು ಬರಲಿವೆ. ಕೃಷಿಕ ಬದುಕಬೇಕಾದರೆ ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ಸರ್ಕಾರ ಪೂರ್ಣ ಪ್ರಮಾಣದ ಬೆಂಬಲ ನೀಡದಿದ್ದರೆ ಮುಂದಕ್ಕೆ ಕೃಷಿಗೆ ಅಪಾಯ ಬರಲಿದೆ