ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಪ್ರದೇಶದಲ್ಲಿರುವ ಕಾಲುಸಂಕವನ್ನು ಅಧಿಕಾರಿಗಳು ಪರಿಶೀಲಿಸಿದರು. ಇಂಜಿನಿಯರ್ ಸಂದೀಪ್ ಶೆಟ್ಟಿ ಮಂದರ್ಸ, ಸಮಾಜ ಕಲ್ಯಾಣ ಇಲಾಖೆಯ ಧೀರಜ್ ಕುಮಾರ್ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಲಾಯಿಲ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪರಿಶಿಷ್ಟ ಜಾತಿ-ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ, ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಪ್ರದೇಶದಲ್ಲಿರುವ ಅಪಾಯಕಾರಿ ಕಾಲುಸಂಕದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಗ್ರಾಮಸ್ಥ ಶೇಖರ್ ಲಾಯಿಲ, ಅಡಿಕೆ ಪಾಲದ ಕಾಲುಸಂಕವನ್ನು ವಿದ್ಯಾರ್ಥಿಗಳು ದಾಟುವ ಫೋಟೋವನ್ನು ಸಭೆಯಲ್ಲಿ ಪ್ರದರ್ಶಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬರೆಮೇಲು ನಡುಗುಡ್ಡೆ ಹಾಗೂ ಬಜಕ್ರೆಸಾಲು ದಲಿತ ಕಾಲನಿಗೆ ಭೇಟಿ ನೀಡಿದ ಅಧಿಕಾರಿಗಳು, ಬಜಕ್ರೆಸಾಲು ದಲಿತ ಕಾಲನಿಗೆ ಸರ್ಕಾರಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಕಂದಾಯ ಇಲಾಖೆ ಅನುಮತಿ ನೀಡಬೇಕು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಲಾಗುವುದು. ಬರೆಮೇಲು ನಡುಗುಡ್ಡೆ ಪ್ರದೇಶಕ್ಕೆ ಶೀಘ್ರವೇ ಕಾಲ್ಸೇತುವೆ ನಿರ್ಮಾಣದ ಅಂದಾಜುವೆಚ್ಚ, ನೀಲಿನಕ್ಷೆ ತಯಾರಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಇಂಜಿನಿಯರಿಂಗ್ ಉಪ ವಿಭಾಗದ ಇಂಜಿನಿಯರ್ ಸಂದೀಪ್ ಶೆಟ್ಟಿ ಮಂದರ್ಸ, ಸಮಾಜ ಕಲ್ಯಾಣ ಇಲಾಖೆಯ ಧೀರಜ್ ಕುಮಾರ್, ಲಾಯಿಲ ಗ್ರಾಪಂ ಪಿಡಿಒ ತಾರಾನಾಥ ನಾಯ್ಕ, ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ಗ್ರಾಪಂ ಸಿಬ್ಬಂದಿ ಪ್ರದೀಪ್, ಹೋರಾಟಗಾರ ಶೇಖರ್ ಲಾಯಿಲ ಇದ್ದರು.