ಉಡುಪಿಯಲ್ಲಿ ಧ್ವಜಾರೋಹಣ ಮಾಡಲಿರುವ ಸಚಿವ ರಿಜ್ವಾನ್ ಅರ್ಷದ್.
* ಜಿಲ್ಲಾ ಉಸ್ತುವಾರಿಗಳ ಬದಲಾವಣೆ
* ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಉಡುಪಿ: ಜಿಲ್ಲಾ ಕೇಂದ್ರದಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದ ಸಚಿವರ ಬದಲಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು ನೇಮಕಗೊಂಡಿದ್ದ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಬಸವಂತಪ್ಪ ಅವರ ಬದಲಾಗಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.
ವಿವಿಧೆಡೆ ಧ್ವಜಾರೋಹಣ
ಆ. 14ರಂದು ರಾತ್ರಿ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿರುವ ಸಚಿವ ರಿಜ್ವಾನ್ ಅರ್ಷದ್ ಆ.15ರಂದು ಬೆಳಗ್ಗೆ 7:30ಕ್ಕೆ ಸರ್ವೀಸ್ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಾಗೂ 8 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಬೆಳಗ್ಗೆ 8:30ಕ್ಕೆ ಅಜ್ಜರಕಾಡು ಕ್ರೀಡಾಂಗಣ ಸಮೀಪದ ಹುತಾತ್ಮ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ, 8:35ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಬಳಿ ಬಾಸ್ಕೆಟ್ ಬಾಲ್ ಗ್ರೌಂಡ್ ಶಂಕುಸ್ಥಾಪನೆ, 8:45ಕ್ಕೆ ಅಜ್ಜರಕಾಡು ಕ್ರೀಡಾಂಗಣದ ಮೇಲ್ಛಾವಣಿ ಕಾಮಗಾರಿ ಉದ್ಘಾಟನೆ, 9 ಗಂಟೆಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಎಲ್ಐಸಿ ಕಟ್ಟಡದಲ್ಲಿ ಕಾರ್ಯಕ್ರಮ, 12:15ಕ್ಕೆ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಪಂ ವತಿಯಿಂದ ಉಡುಪಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಇಲ್ಲು ಫುಡ್ಸ್ ಮಸಾಲಾ ಪೌಡರ್ ಘಟಕ ಉದ್ಘಾಟನೆ, 12:30ಕ್ಕೆ ಬ್ರಹ್ಮಗಿರಿಯ ನಾಯರ್ಕೆರೆ ರಸ್ತೆಯ ಬಳಿ ಜಿಪಂ ವತಿಯಿಂದ ಆರಂಭಿಸಿರುವ ಅಕ್ಕ ಕೆಫೆ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಮಂಗಳೂರಿಗೆ ತೆರಳಲಿದ್ದಾರೆ.