'ಕೇಶವ' ಪ್ರಶಸ್ತಿಗೆ ಆಯ್ಕೆಯಾದ ಜಾನಪದ ಹಿರಿಯಹ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ. 
ಉಡುಪಿ

ಜಾನಪದ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ 'ಕೇಶವ' ಪ್ರಶಸ್ತಿಗೆ ಆಯ್ಕೆ

* ನವೆಂಬರ್​ನಲ್ಲಿ ಪುರಸ್ಕಾರ ಪ್ರದಾನ

ಉಡುಪಿ: ಜಾನಪದ ಹಿರಿಯ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ ಅವರನ್ನು 2026ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೂಡೂರು ಎಂಬಲ್ಲಿ ಜನಿಸಿದ ಚಿನ್ನಪ್ಪ, ಮದ್ರಾಸ್​ ವಿವಿಯಲ್ಲಿ ಎಂಎ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಎ. ವಿವೇಕ ರೈ ಮಾರ್ಗದರ್ಶನದಲ್ಲಿ 'ಭೂತಾರಾಧನೆ ಜಾನಪದೀಯ ಅಧ್ಯಯನ' ವಿಷಯದಲ್ಲಿ ಪಿಎಚ್​.ಡಿ ಗಳಿಸಿದ್ದಾರೆ.

ಉಜಿರೆಯ ಎಸ್​ಡಿಎಂ ಪದವಿ ಕಾಲೇಜ್​ನಲ್ಲಿ ವೃತ್ತಿ ಜೀವನ ಆರಂಭಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ, ಕಲಾನಿಕಾಯದ ಡೀನ್​ ಆಗಿ, ರಿಜಿಸ್ಟ್ರಾರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾವೇರಿಯಲ್ಲಿ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಸಾಹಿತ್ಯ, ತುಳುವ ಮೌಖಿಕ ಕಥನ ಮತ್ತು ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದ ಕುರಿತು ವಿಶೇಷ ಪರಿಣತಿ ಹೊಂದಿದ್ದು ಇವರ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್​ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.