ಪುರಸಭೆ ವ್ಯಾಪ್ತಿಯ ಬಹದ್ದೂರ್ ಷಾ ವಾರ್ಡ್‌ನ ಸಂಗಮ್ ಸೇತುವೆ ಅಡಿಭಾಗದಲ್ಲಿನ ನದಿ ನೀರಿನಲ್ಲಿ ಕೆಂಪು ಬಣ್ಣದ ತ್ಯಾಜ್ಯ ನೀರು ಹರಿಯುತ್ತಿರುವುದು. 
ಉಡುಪಿ

ಪಂಚಗಂಗಾವಳಿಯಲ್ಲಿ ನದಿ ನೀರಿಗೆ ಕೆಂಪು ಬಣ್ಣದ ನೀರಿನ ಹರಿವು

ಮೀನುಗಾಗರರು ಕಂಗಾಲು

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಇಲ್ಲಿನ ಪುರಸಭೆ ವ್ಯಾಪ್ತಿಯ ಬಹದ್ದೂರ್ ಷಾ ವಾರ್ಡ್‌ನ ಸಂಗಮ್ ಸೇತುವೆ ಅಡಿಭಾಗದಲ್ಲಿನ ನದಿ ನೀರಿನಲ್ಲಿ ಕೆಂಪು ಬಣ್ಣದ ತ್ಯಾಜ್ಯ ನೀರು ಹರಿಯುವುದನ್ನು ಕಂಡು ಸ್ಥಳೀಯರು ಹಾಗೂ ಮೀನುಗಾರರು ಕಂಗಾಲಾಗಿದ್ದಾರೆ.

ಸಂಗಮ್ ಸೇತುವೆ ಕೆಳಗೆ(ರಿಂಗ್ ರಸ್ತೆ ಬಳಿ) ಪೈಪ್ ಮೂಲಕ ನದಿಯಲ್ಲಿ ಕಡು ಕೆಂಪು ಬಣ್ಣದ ಎಣ್ಣೆ ಪದಾರ್ಥದಂತಹ ಅಂಶ ಮಿಶ್ರಣವಾಗಿರುವ ತ್ಯಾಜ್ಯ ನೀರು ಅಡಿಯಿಂದ ಬುಗ್ಗೆಯಂತೆ ಎದ್ದು ಹರಿಯುತ್ತಿರುವುದನ್ನು ಗಮನಿಸಿದ ಮೀನುಗಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಸಮೀಪವೇ ಇದೆ ಪಂಜರ ಕೃಷಿ

ಪುರಸಭೆ ವ್ಯಾಪ್ತಿಯ ಬಹದ್ದೂರ್ ಷಾ ವಾರ್ಡ್‌ನ ಸಂಗಮ್ ಸೇತುವೆ ಅಡಿಭಾಗದಲ್ಲಿರುವ ಪಂಜರ ಮೀನು ಕೃಷಿ.

ಸಂಗಮ್ ಸೇತುವೆ ಅಡಿಭಾಗದಲ್ಲಿನ ನದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜರಮೀನು ಕೃಷಿ ಮಾಡಿದ್ದು, ನೀರನ್ನು ಕಂಡು ಮೀನುಗಾರರು ಭೀತಿಗೊಂಡಿದ್ದಾರೆ. ಬಹುತೇಕ ಪಂಜರಗಳಿಗೆ ಮೀನು ಮರಿಗಳನ್ನು ಬಿಡಲಾಗಿದ್ದು, ಅವುಗಳು ಬೆಳವಣಿಗೆ ಹಂತದಲ್ಲಿವೆ. ಹಲವು ಪಂಜರಗಳಲ್ಲಿ ಹಾರ್ವೆಸ್ಟಿಂಗ್(ಕಟಾವು)ಗೆ ಸಿದ್ಧವಿರುವ ಮೀನುಗಳಿವೆ ಎಂದು ಪಂಜರ ಮೀನು ಕೃಷಿಕರಾದ ಚೇತನ ಖಾರ್ವಿ, ಶ್ರೀಕಾಂತ ಖಾರ್ವಿ, ರಾಜೇಶ್ ಖಾರ್ವಿ, ಸಂತೋಷ ಖಾರ್ವಿ, ದಯಾನಂದ ಖಾರ್ವಿ ತಿಳಿಸಿದ್ದಾರೆ.

ಸ್ಥಳೀಯರಿಗೆ ತೊಂದರೆ

ಕೈಯಿಂದ ಲಕ್ಷಾಂತರ ರೂ. ಹಣ ಹಾಕಿ ಪಂಜರ ಕೃಷಿ ಮಾಡಲಾಗುತ್ತಿದೆ. ರಾಸಯನಿಕ, ಮಲೀನಯುಕ್ತ ನೀರಿನ ಕಾರಣದಿಂದ ಪಂಜರದಲ್ಲಿರುವ ಮೀನು, ಮರಿಗಳಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ನೀರು ಗಬ್ಬು ನಾರುತ್ತಿದ್ದು ಪರಿಸರದ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ತಕ್ಷಣ ಸಂಬಂಧಪಟ್ಟವರು ಕ್ರಮ ವಹಿಸಬೇಕು. ಆಸ್ಪತ್ರೆ, ಹೋಟೆಲ್ ಸಹಿತ ಇತರ ತ್ಯಾಜ್ಯಗಳು ಸೇರಿರುವ ಸಾಧ್ಯತೆಗಳಿದ್ದು ಈ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಬೇಕು. ನದಿಗೆ ನೀರು ಬಿಡದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರಾದ ವಿಘ್ನೇಶ್ ಆಗ್ರಹಿಸಿದ್ದಾರೆ.

ಕೆಂಪು ಬಣ್ಣದ ನೀರು ಹರಿಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು ಅಧಿಕಾರಿಗಳನ್ನು ನಿಯೋಜಿಸಿ ನಾಲ್ಕು ಹಂತಗಳಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ. ಯಾರು ನೀರು ಹರಿಸುತ್ತಿದ್ದಾರೆಂದು ಪತ್ತೆ ಮಾಡಿ ಕ್ರಮ ವಹಿಸಲಾಗುತ್ತದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆ, ಪೆರ್ರಿ ರಸ್ತೆ, ಸಂಗಮ್ ಬ್ರಿಡ್ಜ್ ಅಡಿಭಾಗದಲ್ಲಿ ಐ ಆ್ಯಂಡ್ ಡಿ ಯೋಜನೆಯಡಿ 7.5 ಕೋಟಿ ರೂ. ವೆಚ್ಚದಲ್ಲಿ ಕಿರು ಶುದ್ಧೀಕರಣ ಘಟಕ ನಿರ್ಮಿಸಿ ತ್ಯಾಜ್ಯ ನದಿಗೆ ಸೇರದಂತೆ ತಡೆದು ನೀರನ್ನು ಎಸ್.ಟಿ.ಪಿ.ಗೆ ಬಿಡುವ ಯೋಜನೆ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಭೆ ನಡೆಸಿದ್ದು ಟೆಂಡರ್ ಹಂತದಲ್ಲಿದೆ. ಕೆಲ ಇಲಾಖೆಗಳ ನಿರಕ್ಷೇಪಣಾ ಪತ್ರ ಲಭಿಸಬೇಕಿದೆ.
ಆನಂದ್ ಜೆ. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ
ಖಾರ್ವಿ ಸಮಾಜ ಕುಂದಾಪುರದ ಪಂಚಗಂಗಾವಳಿ ನದಿಯನ್ನು ನಂಬಿ ಬದುಕು ಸಾಗಿಸುತ್ತಿದೆ. ಹಲವು ವರ್ಷಗಳಿಂದ ಒಳಚರಂಡಿ ಸಮಸ್ಯೆಯಿದ್ದು ಯುಜಿಡಿ ಕಾಮಗಾರಿ ಶೀಘ್ರ ಮಾಡಿದಲ್ಲಿ ಮಾತ್ರ ಇದಕ್ಕೆ ಪರಿಹಾರ ಲಭಿಸಲಿದೆ. ನದಿಗೆ ಕಲುಷಿತ ನೀರು ಬಿಡುತ್ತಿದ್ದು ಮೀನುಗಾರರು ನದಿಗೆ ಇಳಿಯದಂತಾಗಿದೆ. ನೀರಿನಿಂದ ಸಮಸ್ಯೆಯಾದಲ್ಲಿ ಪಂಜರ ಕೃಷಿ ಮಾಡಿಕೊಂಡಿರುವ ಮೀನುಗಾರರಿಗೆ ನಷ್ಟವಾಗುತ್ತದೆ. ತಕ್ಷಣ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಸ್ಥಳೀಯರೇ ಇದನ್ನು ಮುಚ್ಚುತ್ತೇವೆ.
ಪ್ರಕಾಶ್ ಖಾರ್ವಿ ಪುರಸಭೆ ಮಾಜಿ ಸದಸ್ಯ