ಗಾಳಿ- ಮಳೆಗೆ ರಸ್ತೆ ಬದಿಯಲ್ಲಿ ಬಿದ್ದ ಬ್ಯಾನರ್.
- ಸಂಚಾರಕ್ಕೆ ಅಡ್ಡಿ
- ಕಟೌಟ್
- ಗಾಳಿ ಮಳೆ
- ಫ್ಲೆಕ್ಸ್ ಬ್ಯಾನರ್
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ನಿರಂತರ ಗಾಳಿ- ಮಳೆಗೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿರುವ ಬೃಹತ್ ಕಟೌಟ್‌ಗಳು ಹಾಗೂ ಫ್ಲೆಕ್ಸ್ ಬ್ಯಾನರ್‌ಗಳು ಧರೆಗುರುಳುತ್ತಿವೆ. ಇದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಮಾತ್ರವಲ್ಲದೆ, ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡುವಂತಿದೆ.
ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲಾದ್ಯಂತ ನಗರದ ಪ್ರಮುಖ ವೃತ್ತಗಳು, ಫುಟ್‌ಪಾತ್‌ಗಳು ಹಾಗೂ ವಿದ್ಯುತ್ ಕಂಬಗಳ ಪಕ್ಕ, ಹೆದ್ದಾರಿ ಪಕ್ಕದಲ್ಲಿ, ಬಹು ಮಹಡಿ ಕಟ್ಟಡದ ಮೇಲೆ ಹಾಗೂ ಗ್ರಾಮೀಣ ಭಾಗದ ರಸ್ತೆಯ ಅಕ್ಕಪಕ್ಕದಲ್ಲಿ ಅಳವಡಿಸಿರುವ ಕಾರ್ಪೋರೇಟ್ ಬ್ಯಾನರ್‌ಗಳು, ವಾರ್ಷಿಕೋತ್ಸವ ಸಭೆ- ಸಮಾರಂಭ ಸೇರಿದಂತೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ.
ಜಾಹಿರಾತು ಸಂಸ್ಥೆಗಳಿಗೆ ನಷ್ಟ
ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬ್ಯಾನರ್‌ಗಳು ಬುಡ ಸಹಿತ ಕಿತ್ತು ಧರೆಗೆ ಉರುಳುತ್ತಿವೆ. ಹೀಗಾಗಿ ಒಂದಷ್ಟು ಜಾಹಿರಾತು ಸಂಸ್ಥೆಗಳಿಗೆ ನಷ್ಟವಾದರೆ, ಮತ್ತೊಂದೆಡೆ ರಸ್ತೆಗೆ ಬೀಳುವುದರಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಬಿರುಗಾಳಿ ಬೀಸಿದಾಗ ಈ ಫ್ಲೆಕ್ಸ್‌ಗಳು ಹರಿದು ರಸ್ತೆಗೆ ಬಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಮೇಲೆ ಬೀಳುವ ಆತಂಕ ಎದುರಾಗಿದೆ ಎನ್ನುವುದು ಸಾರ್ವಜನಿಕ ವಲಯದ ಆರೋಪ. ಫುಟ್‌ಪಾತ್‌ಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳು ಉರುಳುವುದರಿಂದ ಪಾದಚಾರಿಗಳು ರಸ್ತೆ ಮಧ್ಯೆ ನಡೆಯುವಂತಾಗಿದೆ.
ತೆರವುಗೊಳಿಸುವವರಿಲ್ಲ
ಜೋರಾಗಿ ಬೀಸುವ ಗಾಳಿಗೆ ಧರೆಗೆ ಉರುಳುವ ಫ್ಲೆಕ್ಸ್ ಬೋರ್ಡ್‌ಗಳನ್ನು ಎರಡು ಮೂರು ದಿನ ಕಳೆದರೂ ತೆರವುಗೊಳಿಸುವವರಿಲ್ಲ. ಹೀಗಾಗಿ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ನಿತ್ಯ ಸಮಸ್ಯೆಗಳಾಗುತ್ತಿದೆ.
ಎಲ್ಲೆಂದರಲ್ಲಿ ಕಟೌಟ್
ಬಹುತೇಕ ಭಾಗದಲ್ಲಿ ಸ್ಥಳೀಯ ಪಂಚಾಯಿತಿ ಹಾಗೂ ನಗರಸಭೆ/ ಮಹಾನಗರ ಪಾಲಿಕೆ ಅನುಮತಿ ಪಡೆದು ಹೋಲ್ಡಿಂಗ್ ಹಾಗೂ ಬ್ಯಾನರ್ ಕಟೌಟ್‌ಗಳನ್ನು ಅಳವಡಿಸಿದರೆ, ಇನ್ನೂ ಬಹುತೇಕ ಭಾಗಗಳಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಬ್ಯಾನರ್‌ಗಳನ್ನು ಹಾಕಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಕಟೌಟ್‌ಗಳನ್ನು ಹಿಡಿದಿಟ್ಟಿರುವ ಕಬ್ಬಿಣದ ರಾಡ್‌ಗಳು ಧರೆಗೆ ಉರುಳುತ್ತಿವೆ.
ಜೋರು ಗಾಳಿ ಬಂದಾಗ ಈ ಬೃಹತ್ ಫ್ಲೆಕ್ಸ್ ಬ್ಯಾನರ್‌ಗಳು ಯಾವ ಕ್ಷಣದಲ್ಲಿ ಬೀಳುತ್ತವೆಯೋ ಎಂಬ ಭಯವಾಗುತ್ತದೆ. ಕತ್ತಲಲ್ಲಿ ಇವು ರಸ್ತೆಗೆ ಬಿದ್ದಿದ್ದರೆ ಕಾಣಿಸುವುದಿಲ್ಲ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
— ನಿತೀನ್, ವಾಹನ ಸವಾರ
ಮಳೆಗಾಲ ಹಿನ್ನೆಲೆಯಲ್ಲಿ ಇಂತಹ ಅಪಾಯಕಾರಿ ಕಟೌಟ್‌ಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ದೊಡ್ಡಮಟ್ಟದ ಅನಾಹುತ ಸಂಭವಿಸುವ ಮುನ್ನ ಸ್ಥಳೀಯಾಡಳಿತ, ನಗರ ಪಾಲಿಕೆಗಳು ಎಚ್ಚೆತ್ತುಕೊಳ್ಳಬೇಕು.
— ಹರೀಶ್ ಶೆಟ್ಟಿ, ಕಾರ್ಕಳ