ಕೇರಳ ರಾಜ್ಯ ಪಿಂಚಣಿದಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು. ಪ್ರಮುಖರಾದ ಬಿ.ನಾಗರಾಜ, ಕೆ.ರಂಜಿತ್, ಅಶೋಕ್ ಬಾಡೂರು, ಈಶ್ವರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೇರಳ ರಾಜ್ಯ ಪಿಂಚಣಿದಾರರ ಸಂಘ(ಕೆಎಸ್‌ಪಿಎಸ್)ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ರಾಜ್ಯ ಹನ್ನೆರಡನೇ ಪಿಂಚಣಿ ಪರಿಷ್ಕರಣೆ ತಕ್ಷಣ ಜಾರಿಗೊಳಿಸಬೇಕು, ‘ಮೆಡಿಸೆಪ್’ ಯೋಜನೆಯಲ್ಲಿನ ಲೋಪದೋಷ ಸರಿಪಡಿಸಬೇಕು, ಪಿಂಚಣಿ ಪರಿಷ್ಕರಣೆ ವಿಫಲಗೊಳಿಸುವ ಪ್ರಯತ್ನ ಕೈಬಿಡಬೇಕು, ತುಟ್ಟಿಭತ್ಯೆಯ ಬಾಕಿ ಇರುವ ಎರಡು ಕಂತು ಮತ್ತು 2021ರ ಜ.1ರಿಂದ ಸಂಗ್ರಹವಾಗಿರುವ ತುಟ್ಟಿಭತ್ಯೆಯ ಬಾಕಿ ಮೊತ್ತ ತಕ್ಷಣ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.
ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಎನ್‌ಜಿಒ ಸಂಘ ಜಿಲ್ಲಾ ಅಧ್ಯಕ್ಷ ಕೆ.ರಂಜಿತ್, ಕೆಎಸ್‌ಪಿಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಅಶೋಕ್ ಬಾಡೂರು, ರಾಜ್ಯ ಸಮಿತಿ ಸದಸ್ಯರಾದ ಈಶ್ವರ್ ರಾವ್, ಕೆ.ದಿಲೀಪ್, ಜಿಲ್ಲಾ ಕೋಶಾಧಿಕಾರಿ ನಾರಾಯಣನ್ ಮಾಸ್ಟರ್ ಉಪಸ್ಥಿತರಿದ್ದರು.
ಕೆಎಸ್‌ಪಿಎಸ್ ಜಿಲ್ಲಾ ಕಾರ್ಯದರ್ಶಿ ಕುಞಿ ರಾಮನ್ ಕೆಲೋತ್ ಸ್ವಾಗತಿಸಿದರು. ಸಂಘಟನೆ ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ರಾಜೇಂದ್ರ ಕುಂಟಾರ್ ವಂದಿಸಿದರು.