dog attack 
ಉಡುಪಿ

ಬಿ.ಸಿ.ರೋಡ್‌ನಲ್ಲಿ ಐವರಿಗೆ ಬೀದಿನಾಯಿ ಕಡಿತ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಶುಕ್ರವಾರ ಐದು ಮಂದಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದ್ದು, ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಬಿ.ಸಿ.ರೋಡ್ ಮಿನಿ ವಿಧಾನಸೌಧ ಮುಂಭಾಗದಿಂದ ಮೆಸ್ಕಾಂವರೆಗೆ ಬೀದಿನಾಯಿಗಳ ಕಾಟ ವಿಪರೀತವಾಗಿದೆ.

ಬೆೆಳಗಿನ ಜಾವ 6ಗಂಟೆಗೆ ಕೈಕುಂಜೆ ನಿವಾಸಿಯೊಬ್ಬರು ತಮ್ಮ ಮಗನನ್ನು ಸ್ಕೂಟರ್‌ನಲ್ಲಿ ಕೋಚಿಂಗ್ ಕ್ಲಾಸ್‌ಗೆ ಬಿಟ್ಟು ಮರಳುತ್ತಿದ್ದಾಗ ಮೆಸ್ಕಾಂ ಬಳಿ ಹೊಂಡವಿರುವ ಕಾರಣ ನಿಧಾನವಾಗಿ ಚಲಿಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ನಾಯಿಯೊಂದು ಅವರ ಕಾಲಿಗೆ ಕಚ್ಚಿದ್ದು, ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಆದಾದ ಬಳಿಕ ಮೆಸ್ಕಾಂ ಬಳಿ ಆಹಾರ ಪಾರ್ಸೆಲ್ ನೀಡಲು ಹೋಗುತ್ತಿದ್ದ ಬಿ.ಸಿ.ರೋಡ್ ನಿವಾಸಿಯೊಬ್ಬರಿಗೂ ನಾಯಿ ಕಡಿದಿದೆ. ನಂತರ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕಾಲಿಗೆ ಕಚ್ಚಿದೆ. ಇನ್ನೊಬ್ಬರಿಗೂ ನಾಯಿ ಕಚ್ಚಿರುವ ಪ್ರಕರಣ ನಡೆದಿದ್ದು, ಒಟ್ಟು ನಾಲ್ವರು ಪುರುಷರು ಮತ್ತು ಓರ್ವ ಮಹಿಳೆಗೆ ನಾಯಿ ಕಚ್ಚಿದೆ. ಎಲ್ಲರಿಗೂ ಒಂದೇ ನಾಯಿ ಕಚ್ಚಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಿಸುವಂತೆ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಗೆ ಸಂತ್ರಸ್ತರು ದೂರು ನೀಡಿದ್ದಾರೆ.

ನೂರಾರು ಮಂದಿ ನಡೆದಾಡುವ ಜಾಗ

ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಿಂದ ಕೈಕುಂಜಕ್ಕೆ ತೆರಳುವ ರಸ್ತೆಯಲ್ಲಿ ತೋಟಗಾರಿಕೆ, ಮೆಸ್ಕಾಂ, ಎಪಿಎಂಸಿ, ಶಿಶು ಅಭಿವೃದ್ಧಿ ಇಲಾಖೆ, ಅಂಗನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನೂರಾರು ಮನೆಗಳು ಇಲ್ಲಿವೆ. ಅನೇಕ ಮಂದಿ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಇಲ್ಲಿ ಬೀದಿನಾಯಿಗಳು ಕೆಲವೊಮ್ಮೆ ಹಿಂಡುಹಿಂಡಾಗಿ ಕಾಣಸಿಗುತ್ತವೆ. ಶಾಲಾ ಮಕ್ಕಳು ಓಡಾಡುವುದರಿಂದ ಅನಾಹುತ ಸಂಭವಿಸುವುದಕ್ಕೂ ಮುನ್ನವೇ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.