'ಬಡತನಮುಕ್ತ ಮತ್ತು ಸುಧಾರಿತ ಜೀವನೋಪಾಯ' ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ 1 ಕೋಟಿ ರೂ. ಬಹುಮಾನ ಗಳಿಸಿದ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ.
* ಕೇಂದ್ರದ ಡಿಡಿಯುಪಿಎಸ್ವಿಪಿ ಪುರಸ್ಕಾರ
* ಅನುದಾನದ ಬಹುಮಾನ ಘೋಷಣೆ
* ಮುದ್ರಾಡಿ ಗ್ರಾಪಂಗೆ 1 ಕೋಟಿ ರೂ. ಬಹುಮಾನ
ಉಡುಪಿ: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ "ದೀನ ದಯಾಳ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ (ಡಿಡಿಯುಪಿಎಸ್ವಿಪಿ)'ಕ್ಕೆ ಆಯ್ಕೆಯಾಗಿದ್ದ ಉಡುಪಿ ಜಿಲ್ಲೆಯ 5 ಗ್ರಾಪಂಗಳಿಗೆ ಅನುದಾನದ ಬಹುಮಾನ ಘೋಷಿಸಲಾಗಿದೆ.
ರಾಜ್ಯಗಳಿಗೆ ಕೊಡುವ ಒಟ್ಟು 6 ಪ್ರಶಸ್ತಿಗಳ ವಿಭಾಗದಲ್ಲಿ ಉಡುಪಿ ಜಿಲ್ಲೆಯ 5 ಗ್ರಾಪಂಗಳು 5 ವಿಭಾಗದಲ್ಲಿ ಆಯ್ಕೆಯಾಗಿ ಸಾಧನೆ ಮಾಡಿತ್ತು.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ 'ಬಡತನಮುಕ್ತ ಮತ್ತು ಸುಧಾರಿತ ಜೀವನೋಪಾಯ' ವಿಭಾಗದಲ್ಲಿ, ಮಡಾಮಕ್ಕಿ ಗ್ರಾಪಂ 'ಜಲ ಸಮೃದ್ಧ' ವಿಭಾಗದಲ್ಲಿ, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂ 'ಆರೋಗ್ಯಕರ ಪಂಚಾಯತ್' ವಿಭಾಗದಲ್ಲಿ, ಹಕ್ಲಾಡಿ ಗ್ರಾಪಂ 'ಸಾಮಾಜಿಕ ನ್ಯಾಯ ಮತ್ತು ಸುರಕ್ಷಿತ' ವಿಭಾಗದಲ್ಲಿ ಹಾಗೂ ಕಾರ್ಕಳ ತಾಲೂಕಿನ ಸಾಣೂರು ಗ್ರಾಪಂ 'ಮೂಲ ಸೌಕರ್ಯದಲ್ಲಿ ಸ್ವಾವಲಂಬಿ' ವಿಭಾಗದಲ್ಲಿ ಸಾಧನೆ ಮಾಡಿತ್ತು.
ತಾಲೂಕು ಗ್ರಾಪಂ ಸ್ಥಾನ ಮೊತ್ತ
ಹೆಬ್ರಿ ಮುದ್ರಾಡಿ ಪ್ರಥಮ 1 ಕೋಟಿ ರೂ.
ಹೆಬ್ರಿ ಮಡಾಮಕ್ಕಿ ದ್ವಿತೀಯ 75 ಲಕ್ಷ ರೂ.
ಕುಂದಾಪುರ ವಂಡ್ಸೆ ದ್ವಿತೀಯ 75 ಲಕ್ಷ ರೂ.
ಕುಂದಾಪುರ ಹಕ್ಲಾಡಿ ದ್ವಿತೀಯ 25 ಲಕ್ಷ ರೂ.
ಕಾರ್ಕಳ ಸಾಣೂರು ದ್ವಿತೀಯ 25 ಲಕ್ಷ ರೂ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ 5 ಗ್ರಾಪಂ ಆಯ್ಕೆಯಾಗಿದ್ದವು. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ಇದೀಗ ಗ್ರಾಪಂಗಳಿಗೆ ಪ್ರಶಸ್ತಿ ಮೊತ್ತ ಘೋಷಿಸಲಾಗಿದ್ದು ಮುದ್ರಾಡಿ ಗ್ರಾಪಂಗೆ 1 ಕೋಟಿ ರೂ. ಲಭಿಸಿದೆ. ಸಾಧನೆ ಮಾಡಿರುವ ಎಲ್ಲ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರವನ್ನೂ ನಾನು ಅಭಿನಂದಿಸುತ್ತೇನೆ.
— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.