ಮೂಲ್ಕಿ ಚಿತ್ರಾಪು ತಂಕರನಾಗ ಕೊಳದಲ್ಲಿ ಹಿಡಿದ ಮೀನು.
ಮೂಲ್ಕಿ: ಶ್ರೀಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲ ವಾರ್ಷಿಕ ಜಾತ್ರಾ ಮಹೋತ್ಸವ ಭಕ್ತಿ ಮತ್ತು ಸಂಭ್ರಮದ ಸಮ್ಮಿಲನವಾಗಿ ಮೂಡಿಬರುತ್ತಿದೆ. ದೇವಾಲಯದ ಒಳಗೆ ಆಗಮೋಕ್ತ ವಿಧಿವಿಧಾನಗಳು ನಡೆಯುತ್ತಿದ್ದರೆ, ಹೊರಗೆ ಮಾಗಣೆಯ ಗ್ರಾಮಸ್ಥರು ತಮ್ಮದೇ ವಿಶಿಷ್ಟ ಗ್ರಾಮೀಣ ಸಂಪ್ರದಾಯ ಆಚರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಜಾತ್ರೆಯ ಅಂಗವಾಗಿ ಚಿತ್ರಾಪು ಗ್ರಾಮದ ಮಕುರ್ಂಜ ಕಲ್ಸಂಕ ಸುಣ್ಣದ ಗೂಡು ಬಳಿ, ಶಾಂಭವಿ ಮತ್ತು ನಂದಿನಿ ನದಿಗಳು ಸಂಗಮಿಸುವ ತಂಕರನಾಗ ಕೊಳ ಮತ್ತು ಕೊಂಕಣ ತೋಡುಗಳಲ್ಲಿ ಮೀನು ಹಿಡಿಯುವ ಅಪೂರ್ವ ಸಂಪ್ರದಾಯ ಬುಧವಾರ ನಡೆಯಿತು. ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರು ಹಾಗೂ ಗ್ರಾಮಸ್ಥರು ವಿವಿಧ ರೀತಿಯ ಬಲೆ ಬಳಸಿ ಮೀನು ಹಿಡಿಯುವುದರಲ್ಲಿ ಮಗ್ನರಾಗಿದ್ದರು. ಇಲ್ಲಿ ಹಿಡಿಯುವ ಮೀನನ್ನು ಕೇವಲ ಆಹಾರವೆಂದು ಪರಿಗಣಿಸದೆ, ‘ದೇವರ ಪ್ರಸಾದ’ವೆಂದೇ ಭಾವಿಸಲಾಗುತ್ತದೆ. ಈ ಕೊಳಗಳಲ್ಲಿ ವರ್ಷದ ಇತರ ದಿನಗಳಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಮಾತ್ರ ಗ್ರಾಮಸ್ಥರಿಗೆ ಮೀನು ಹಿಡಿಯಲು ಅವಕಾಶ ನೀಡಲಾಗುತ್ತದೆ.
ಹಿರಿಯರ ನೆನಪು
ಬಪ್ಪನಾಡು ಜಾತ್ರೆಯ ಸಂದರ್ಭ ಅಗಲಿದ ಕುಟುಂಬದ ಹಿರಿಯರಿಗೆ ಮೀನಿನ ಪಲ್ಯ ಮತ್ತು ಕುಚ್ಚಲಕ್ಕಿ ಅನ್ನವನ್ನು ಬಡಿಸಿ ಪೂಜಿಸುವುದು ಇಲ್ಲಿನ ಪುರಾತನ ಪದ್ಧತಿ. ಆಲದುರ್ಗೇ ಎಂದೇ ಕರೆಯಲ್ಪಡುವ ಬಪ್ಪನಾಡು ದೇವಿಯ ಜಾತ್ರೆಗೆ ಮೀನಿನ ಅಡುಗೆ ಅತ್ಯಂತ ಪ್ರಮುಖವಾಗಿದೆ.
ಹೊಳೆಯಲ್ಲಿ ದೊರಕುವ ವಿವಿಧ ಜಾತಿಯ ಮೀನುಗಳು ತಿನ್ನಲು ಬಲು ರುಚಿಕರವಾಗಿರುತ್ತವೆ. ಹಿರಿಯರು ಇಂದಿಗೂ ಇದನ್ನು ದೇವಿಯ ಪ್ರಸಾದವೆಂದೇ ನಂಬುತ್ತಾರೆ.