ತ್ರಾಸಿ-ಮುಳ್ಳಿಕಟ್ಟೆ ಫ್ಲೈಓವರ್ ಮೇಲೆ ಮೀನು ಸಾಗಾಟ ವಾಹನ ಪಲ್ಟಿಯಾಗಿರುವುದು. 
ಉಡುಪಿ

ಮುಳ್ಳಿಕಟ್ಟೆಯಲ್ಲಿ ಮೀನು ಸಾಗಾಟ ವಾಹನ ಪಲ್ಟಿ

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ-ಮುಳ್ಳಿಕಟ್ಟೆ ಫ್ಲೈಓವರ್ ಮೇಲೆ ಶುಕ್ರವಾರ ಬೆಳಗ್ಗೆ ಮೀನು ಸಾಗಾಟದ ವಾಹನವೊಂದು ಆಕ್ಸಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಮುಂಬೈನಿಂದ ಮಂಗಳೂರಿಗೆ ಮೀನು ಸಾಗಿಸುತ್ತಿದ್ದ ವಾಹನ ಫ್ಲೈಓವರ್ ಮೇಲೆ ಚಲಿಸುತ್ತಿದ್ದಾಗ ಒಂದು ಬದಿಯ ಆಕ್ಸಲ್ ತುಂಡಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಮೇಲೆ ಪಲ್ಟಿಯಾಗಿದೆ. ವಾಹನದಲ್ಲಿ ಚಾಲಕನೊಬ್ಬನೇ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬಸ್ ಡಿಕ್ಕಿ

ಕುಂದಾಪುರ: ಕೋಟೇಶ್ವರ ಗ್ರಾಮದ ಕೋಟೇಶ್ವರ ಮೀನು ವಾರ್ಕೆಟ್ ಬಳಿಯ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ಬಸ್ಸೊಂದು ಕೋಟೇಶ್ವರದಿಂದ ಅಂಕದಕಟ್ಟೆಯ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಅಂಕದಕಟ್ಟೆ ಗೋಪಲಾಡಿ ನಿವಾಸಿ ಸುಧಾಕರ ಪೂಜಾರಿ ಎಂಬುವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುಧಾಕರ ಅವರು ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗ ಕೊಡಿಸುವುದಾಗಿ ವಂಚನೆ

ಕುಂದಾಪುರ: ಪಾರ್ಟ್ ಟೈಮ್ ಉದ್ಯೋಗ ನೀಡುವುದಾಗಿ ನಂಬಿಸಿ ಗುಲ್ವಾಡಿ ಗ್ರಾಮದ ಸೌಕೂರು ಮೊರಿಕಾರ್ ನಿವಾಸಿ ರೇಣುಕಾ ಗಣೇಶ ದೇವಾಡಿಗ ಅವರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. ಅವರು ಫೇಸ್‌ಬುಕ್‌ನಲ್ಲಿ ಪಾರ್ಟ್‌ಟೈಮ್ ಉದ್ಯೋಗವಿರುವ ಜಾಹೀರಾತು ನೋಡಿ ವಾಟ್ಸ್‌ಆ್ಯಪ್ ಮೂಲಕ ತನ್ನ ವೈಯಕ್ತಿಕ ವಾಹಿತಿ ನೀಡಿದ್ದರು. ನಂತರ ವಂಚಕರು ಟೆಲಿಗ್ರಾಮ್ ಖಾತೆಯಲ್ಲಿ ಲಿಂಕ್ ಕಳುಹಿಸಿ ಇದರಲ್ಲಿ ಕೆಲವೊಂದು ಟಾಸ್ಕ್ ಕೊಟ್ಟಿದ್ದು ಅದನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದು ಪ್ರಥಮ ಟಾಸ್ಕ್ ಪೂರ್ಣಗೊಳಿಸಿದ್ದಾಗ 120 ರೂ. ನೀಡಿ, ಬಳಿಕ ಹಂತ ಹಂತವಾಗಿ ಒಟ್ಟು 1,86,570 ರೂ.ಗಳನ್ನು ವಂಚಕರ ಖಾತೆಗೆ ಹಾಕಿದ್ದಾರೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

ಕುಂದಾಪುರ: ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಂಜುನಾಥ ಎಂಬುವರ ಮೇಲೆ ಕುಂದಾಪುರದಲ್ಲಿ ಹಲ್ಲೆ ನಡೆಸಲಾಗಿದೆ. ಭಟ್ಕಳದಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶಿರೂರು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಬಸ್ ಹತ್ತಿ ಕುಂದಾಪುರಕ್ಕೆ ಶಕ್ತಿ ಯೋಜನೆಯಲ್ಲಿ ಟಿಕೆಟ್ ಪಡೆದಿದ್ದು, ಉಪ್ಪುಂದ ಸಮೀಪ ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದರು. ಆದರೆ ಸಂಸ್ಥೆ ನಿಯಮ ಪ್ರಕಾರ ನೀವು ಎಲ್ಲಿಗೆ ಟಿಕೆಟ್ ವಾಡಿದ್ದೀರಿ ಅಲ್ಲೇ ಇಳಿಯಬೇಕು. ಮಧ್ಯದಲ್ಲಿ ಇಳಿಯಬಾರದು ಎಂದು ನಿರ್ವಾಹಕ ಮಂಜುನಾಥ ತಿಳಿಸಿದ್ದಾರೆ. ಕುಂದಾಪುರದಲ್ಲಿ ಬಸ್ ನಿಲ್ಲಿಸಿದ್ದ ವೇಳೆ ಫೈಸಲ್ ಮೊಹಮ್ಮದ್ ಸಾವೂದ್ ಮತ್ತು ಅಸೀಫ್ ಎಂಬುವರು ನಿರ್ವಾಹಕ ಮಂಜುನಾಥ ಹಾಗೂ ಚಾಲಕ ಲಕ್ಷ್ಮಣ ನಾಯ್ಕ ಎಂಬುವರಿಗೆ ಹಲ್ಲೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಪ್ರತಿ ದೂರು ದಾಖಲಿಸಿದ ಸನಾ ಎಂಬುವರು, ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿದಾಗ ಬಸ್ ನಿರ್ವಾಹಕ ಸನಾ ಹಾಗೂ ತಾಯಿ ಶಾಹಿನಾ ಅವರನ್ನು ತಡೆದು ಉಡಾಫೆಯಿಂದ ವಾತನಾಡಿ ತೊಂದರೆ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.