ಉಡುಪಿ ಹಿರಿಯಡ್ಕದ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಿತರಿಸಲಾಯಿತು. ಮಂಜುನಾಥ್ ಭಟ್, ಬಿ.ಎಲ್. ವಿಶ್ವಾಸ್, ಅಶೋಕ್ ಜೋಗಿ , ಲಕ್ಷ್ಮೀ ಶೆಟ್ಟಿಗಾರ್, ಶ್ರೀನಿವಾಸ್ ರಾವ್ ಇತರರಿದ್ದರು.
* ಉಡುಪಿ ಡಿಡಿಪಿಯು ಮಾರುತಿ ಮಾಹಿತಿ
* 23 ಕೇಂದ್ರಗಳಲ್ಲಿ 8,746 ವಿದ್ಯಾರ್ಥಿಗಳಿಂದ ನೋಂದಣಿ
ಉಡುಪಿ: ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಕರ್ನಾಟಕದ ಪರೀಕ್ಷಾ ಪ್ರಾಧಿಕಾರದಿಂದ ಕೆಮೆಸ್ಟ್ರಿ ಮತ್ತು ವಿಷಯಗಳ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಿತು.
ಕೆಮೆಸ್ಟ್ರಿ ವಿಷಯಕ್ಕೆ 4,040 ವಿದ್ಯಾರ್ಥಿಗಳು ಹಾಗೂ 4,702 ವಿದ್ಯಾರ್ಥಿನಿಯರು ಸೇರಿ ಒಟ್ಟು 8,746 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಇದರಲ್ಲಿ 3,888 ವಿದ್ಯಾರ್ಥಿಗಳು ಮತ್ತು 4,496 ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದರು. ಒಟ್ಟು 151 ವಿದ್ಯಾರ್ಥಿಗಳು ಹಾಗೂ 202 ವಿದ್ಯಾರ್ಥಿನಿಯರು ಸೇರಿ ಒಟ್ಟು 353 ಮಕ್ಕಳು ಗೈರಾಗಿದ್ದರು.
ಫಿಸಿಕ್ಸ್ ವಿಷಯಕ್ಕೆ 4,040 ವಿದ್ಯಾರ್ಥಿಗಳು ಹಾಗೂ 4,702 ವಿದ್ಯಾರ್ಥಿನಿಯರು ಸೇರಿ ಒಟ್ಟು 8,746 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಇದರಲ್ಲಿ 3,888 ವಿದ್ಯಾರ್ಥಿಗಳು ಮತ್ತು 4,499 ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದರು. ಒಟ್ಟು 154 ವಿದ್ಯಾರ್ಥಿಗಳು ಹಾಗೂ 197 ವಿದ್ಯಾರ್ಥಿನಿಯರು ಸೇರಿ ಒಟ್ಟು 351 ಮಕ್ಕಳು ಗೈರಾಗಿದ್ದರು. ಪರೀಕ್ಷೆಯಲ್ಲಿ ಯಾವುದೇ ನಕಲು, ಡಿಬಾರ್ ಪ್ರಕರಣ ಘಟಿಸಿಲ್ಲ ಎಂದು ಡಿಡಿಪಿಯು ಮಾರುತಿ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ
ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷಾ ಕೇಂದ್ರ (ಸಂಖ್ಯೆ 776) ಮಂಜೂರಾಗಿದ್ದ ಉಡುಪಿ ತಾಲೂಕಿನ ಹಿರಿಯಡ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಿರಿಯಡ್ಕದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪ್ರಸಾದ ಭೋಜನ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ (ರಿ.)ವು ಉಚಿತವಾಗಿ ಊಟದ ವ್ಯವಸ್ಥೆ ಮಾಡಿತ್ತು.
ದೂರದ ಊರುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ವಿರಾಮದ ನಂತರವೂ ಪರೀಕ್ಷೆ ಇದ್ದ ಕಾರಣ ಹಾಗೂ ಕಾಲೇಜಿನ ಸುತ್ತಮುತ್ತ ಸಮೀಪದಲ್ಲಿ ಹೋಟೆಲ್ ಸೌಲಭ್ಯ ಇಲ್ಲದ್ದರಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಸಿವಿನಿಂದ ಪರೀಕ್ಷೆ ಬರೆಯಬಾರದೆಂದು ಉಚಿತವಾಗಿ ಊಟ ನೀಡಲಾಯಿತೆಂದು ಪ್ರಾಂಶುಪಾಲ ಮಂಜುನಾಥ್ ಭಟ್ ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಪ್ರಸಾದ ಭೋಜನ ಸಮಿತಿಯ ಅಧ್ಯಕ್ಷ, ಎಸ್ಡಿಎಂ ಸದಸ್ಯ ಅಶೋಕ್ ಜೋಗಿ, ಲಕ್ಷ್ಮೀ ಶೆಟ್ಟಿಗಾರ್, ಹಳೆಯ ವಿದ್ಯಾರ್ಥಿಗಳ ಸಂಘ (ರಿ.)ದ ಅಧ್ಯಕ್ಷ ಶ್ರೀನಿವಾಸ್ ರಾವ್ ಇತರರು ಸಹಕರಿಸಿದರು.