ಉಡುಪಿಯ ಪೆರಂಪಳ್ಳಿಯಲ್ಲಿ ಬೆಂಕಿ ತಗುಲಿ ಸುಟ್ಟುಕರಕಲಾದ ಆಟೋ. ಸಮಯ ಪ್ರಜ್ಞೆಯಿಂದ ಮನೆಯವರನ್ನು ರಕ್ಷಿಸಿದ ಇಂಜಿನಿಯರ್ ಮನೋಜ್. ರಕ್ಷಣೆಗೊಳಗಾದ ಕಾರು.
* ಸಮಯಪ್ರಜ್ಞೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ
ಉಡುಪಿ: ಮನೆಯ ಶೆಡ್ನಲ್ಲಿ ನಿಲ್ಲಿಸಿದ್ದ ಇಲೆಕ್ಟ್ರಿಕ್ ಆಟೋ ಏಕಾಏಕಿ ಹೊತ್ತಿ ಉರಿದ ಪರಿಣಾಮ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಸ್ಕೂಟರ್ಗೂ ಬೆಂಕಿ ವ್ಯಾಪಿಸಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ ಘಟನೆ ಪೆರಂಪಳ್ಳಿ ಸಮೀಪ ನಡೆದಿದೆ.
ಸಮಯಪ್ರಜ್ಞೆ ಮೆರೆದ ಯುವಕರಿಬ್ಬರು ತಮ್ಮ ಜೀವದ ಹಂಗು ತೊರೆದು ಬೆಂಕಿಯನ್ನು ನಿಯಂತ್ರಿಸಿ, ಮನೆಯವರನ್ನು ರಕ್ಷಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಬೊಬ್ಬೆ ಹೊಡೆದ ಮನೆಯ ಯಜಮಾನ
ಆ.23ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಪೆರಂಪಳ್ಳಿ ಸಮೀಪದ ಮನೆಯೊಂದರ ಶೆಡ್ನಲ್ಲಿದ್ದ ಇಲೆಕ್ಟ್ರಿಕ್ ಆಟೋಗೆ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಎಂಜಿ ಕಾರು ಹಾಗೂ ಸ್ಕೂಟರ್ಗೂ ವ್ಯಾಪಿಸಿತು. ಈ ವೇಳೆ ಮನೆಯೊಳಗಿದ್ದ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಯಜಮಾನರು ಬೆಂಕಿಯನ್ನು ಕಂಡು ಆತಂಕಗೊಂಡು ಸಹಾಯಕ್ಕಾಗಿ ಬೊಬ್ಬೆ ಹೊಡೆದರು.
ಸಹಾಯಕ್ಕೆ ಧಾವಿಸಿದ ಯುವಕರು
ಅದೇ ಸಂದರ್ಭದಲ್ಲಿ ಸಮೀಪದ ತಮ್ಮ ಕಟ್ಟಡ ನಿರ್ಮಾಣದ ಸೈಟ್ನಲ್ಲಿ ಕೆಲಸ ಮುಗಿಸಿ ಹೊರಟಿದ್ದ ಇಂಜಿನಿಯರ್ ಮನೋಜ್ ಎಂಬವರು ಮನೆಯ ಮುಂದೆ ಬೆಂಕಿ ಉರಿಯುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ಅವರು ಬೆಂಕಿ ವ್ಯಾಪಿಸುವುದನ್ನು ತಡೆಯಲು ಮುಂದಾದರು. ಇದೇ ವೇಳೆ ತನ್ನ ಮನೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಹಿಮವರ್ಣಂ ಏಷ್ಯನ್ ಪೇಂಟ್ಸ್ನ ಯುವ ಉದ್ಯಮಿ ಶರತ್ ಅವರೂ ಸ್ಥಳಕ್ಕೆ ಧಾವಿಸಿ ಬಂದರು.
ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆಯೇ ಬೆಂಕಿ ತಗುಲಿದ್ದ ಕಾರನ್ನು ಸುರಕ್ಷಿತವಾಗಿ ಹೊರಕ್ಕೆ ತಂದರು. ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ನೀರು, ಮಣ್ಣು ಸೇರಿದಂತೆ ವಿವಿಧ ಮಾರ್ಗ ಅನುಸರಿಸಿ ಆಟೋ ಸ್ಕೂಟರ್ಗೆ ವ್ಯಾಪಿಸಿದ್ದ ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ. ತಮ್ಮ ಜೀವವನ್ನೂ ಲೆಕ್ಕಿಸದೆ ಯಾರದೋ ಮನೆ ಹಾಗೂ ಅವರ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ತಡೆದ ಯುವಕರಿಬ್ಬರ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸದ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.