ಬೆಂಕಿ ಅವಘಡದಲ್ಲಿ ಸಂಪೂರ್ಣ ಸುಟ್ಟುಹೋದ ಟೈರ್ ಅಂಗಡಿ 
ಉಡುಪಿ

ಬೆಂಕಿ ಅವಘಡ, ಹೊತ್ತಿ ಉರಿದ ಟೈರ್ ಅಂಗಡಿ

ಇಂದಿರಾ ಎನ್ ಕೆ
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಜಾ ಬಳಿ ಭಾನುವಾರ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಸಿಡಿದ ಬೆಂಕಿ ಕಿಡಿ ಹುಲ್ಲಿಗೆ ತಗುಲಿ ಪಕ್ಕದ ಟೈರ್ ಪಂಕ್ಚರ್ ರಿಪೇರಿ ಅಂಗಡಿಗೆ ಹಬ್ಬಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್‌ಕಿಟ್, ಗ್ರಾಹಕರ ಟೈರ್ ಸಹಿತ ಎಲ್ಲವೂ ಸುಟ್ಟು ಹೋಗಿದೆ. ಬಿಹಾರ ಮೂಲದ ಸೈಫುಲ್ಲಾ ಎಂಬುವರು 10 ವರ್ಷದ ಹಿಂದೆ ಹೆಜಮಾಡಿಗೆ ಬಂದು ಟೈರ್ ಪಂಕ್ಚರ್ ಕೆಲಸ ಮಾಡುತ್ತಾ ಸ್ವಂತ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದರು. ಅದೇ ಅಂಗಡಿಯಲ್ಲಿ ಮಲಗುತ್ತಿದ್ದ ಅವರಿಗೆ ಘಟನೆ ಅರಿವಿಗೆ ಬರುತ್ತಿದ್ದಂತೆ ಎದ್ದು ಹೊರಬರುವಷ್ಟರಲ್ಲಿ ಬೆಂಕಿ ಅಂಗಡಿಯಿಡೀ ವ್ಯಾಪಿಸಿದ್ದು, ಟೈರ್‌ಗಳನ್ನೆಲ್ಲ ಸುಟ್ಟು ಹಾಕಿತ್ತು. ಸ್ಥಳೀಯರು ಮತ್ತು ಪಡುಬಿದ್ರಿ ಪೊಲೀಸರು ನೀರು ಹಾಯಿಸಿ ಬೆಂಕಿ ಶಮನ ಕಾರ್ಯ ಮಾಡಿದರು. ಬಳಿಕ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು.