ಬಹುತೇಕ ಪೂರ್ಣಗೊಂಡ ಕುಂದಾಪುರದ ರಿಂಗ್ ರೋಡ್.  
ಉಡುಪಿ

ರಿಂಗ್ ರೋಡ್ ಕಾಮಗಾರಿಗೆ ಫೈನಲ್ ಟಚ್

ರಾಘವೇಂದ್ರ ಪೈ ಕುಂದಾಪುರ
ಕುಂದಾಪುರ ನಗರದ ಫೆರಿ ರೋಡ್‌ನಿಂದ ಸಂಗಮ್‌ಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ರಿಂಗ್ ರೋಡ್ ಕಾಮಗಾರಿ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ, ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸುವ ಈ ರಿಂಗ್ ರೋಡ್‌ಗೆ 20 ವರ್ಷಗಳ ಬಳಿಕ ಸ್ಪಷ್ಟ ರೂಪ ದೊರೆಯುತ್ತಿದೆ.
2006-07ರಲ್ಲಿ ಆಗಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಆರಂಭಗೊಂಡ ಯೋಜನೆಗೆ 20 ಕೋಟಿ ರೂ. ಮಂಜೂರಾಗಿತ್ತು. 19.8 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. 2023ರಲ್ಲಿ ಹಾಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿಯಂತೆ ಅನುದಾನಕ್ಕೆ ಸಿಎಂ ಅನುಮೋದನೆ ನೀಡಿದ್ದರು.
ರಿಂಗ್ ರೋಡ್ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶಿಸದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ. ಆದರೆ ನಾನಾ ಕಾರಣಗಳಿಂದ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಮಂಜೂರಾತಿ ವಿಳಂಬವಾಗುತ್ತಿತ್ತು.

ಅಡೆತಡೆಗಳ ನಿವಾರಣೆ

1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಿಂಗ್‌ರೋಡ್ ನಂತರದ ದಿನಗಳಲ್ಲಿ ನಿರ್ವಹಣೆ ಕಾಣದೆ ವರ್ಷಗಳೇ ಸಂದುಹೋಗಿತ್ತು. ಮಳೆಗಾಲದಲ್ಲಿ ರಿಂಗ್‌ರೋಡ್‌ನಲ್ಲಿ ಬೃಹತ್ ಗುಂಡಿಗಳು ಸೃಷ್ಟಿಯಾಗಿ ವಾಹನ ಓಡಾಟವೂ ದುಸ್ತರವಾಗಿತ್ತು. ಕ್ರಿಯಾಯೋಜನೆ, ಅಂದಾಜುಪಟ್ಟಿ ತಯಾರಾಗಿ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭಿಸಿದಾಗ ಸಮಸ್ಯೆಗಳ ಸರಮಾಲೆ ಉಂಟಾಗಿತ್ತು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಮಸ್ಯೆಗಳನ್ನೆಲ್ಲ ನಿವಾರಿಸಲು ಪ್ರಯತ್ನಿಸಿದ್ದರು. ಸಿಆರ್‌ಜಡ್ ನಿರಾಕ್ಷೇಪಣೆ ಸಿಕ್ಕಿರಲಿಲ್ಲ. ಮೆಸ್ಕಾಂ ಕಂಬ ಹಾಕುವ ವಿಚಾರ ಕೂಡಾ ಗುತ್ತಿಗೆದಾರರ ಜತೆ ತಗಾದೆಗೆ ಕಾರಣವಾಗಿತ್ತು. ಇದನ್ನೆಲ್ಲ ಶಾಸಕರು ಪರಿಹರಿಸಿದ್ದರು. ಇದೀಗ ಪೂರ್ಣತೆಯ ಹಂತಕ್ಕೆ ಬಂದಿದೆ.
ಮೀನುಗಾರಿಕೆ ವಲಯ ಎಂದು ಗುರುತಿಸಿಕೊಂಡಿರುವ ಖಾರ್ವಿಕೇರಿ, ಪಂಚಗಂಗಾವಳಿ, ಮದ್ದುಗುಡ್ಡೆ ಮೂಲಕ ಹೋಗಿ ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್ ರೋಡ್ ಸಂಗಮ್ ಜಂಕ್ಷನ್‌ನಿಂದ ಫೆರಿ ರೋಡ್‌ವರೆಗೆ ಸಂಪರ್ಕ ಬೆಸೆಯುತ್ತದೆ.

ಹೇಗಿದೆ ರಿಂಗ್ ರೋಡ್?

ಪಾದಚಾರಿ ದಾರಿ, ನದಿಗೆ ತಡೆಗೋಡೆ, ಚರಂಡಿ, ವಿದ್ಯುತ್ ದೀಪಗಳ ಬೆಳಕಿನ ವ್ಯವಸ್ಥೆಯೊಂದಿಗೆ ರಿಂಗ್‌ರೋಡ್ ಅತ್ಯಾಕರ್ಷಕವಾಗಿ ಕಾಣುವಂತೆ ನಿರ್ಮಾಣವಾಗುತ್ತಿದೆ. ಕೊನೆ ಹಂತದ ಕಾಂಕ್ರಿಟ್ ಹಾಕುವ ಕಾರ್ಯ ನಡೆದಿದೆ. ಪಾದಚಾರಿ ಪಥ ನಿರ್ಮಾಣವಾಗಬೇಕಿದೆ. ಉಳಿದಂತೆ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಅಪಾಯಕಾರಿಯಾಗಿ ವಾಹನಗಳು ಓಡಾಡದಂತೆ ಇಲ್ಲಿ ವೇಗತಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಂಚಗಂಗಾವಳಿ ನದಿ ಬಳಿ ಈಗಾಗಲೇ ರಸ್ತೆ ಕಾಮಗಾರಿ ಪೂರ್ತಿಯಾಗಿದೆ. ಈ ರಸ್ತೆಯು ಕುಂದಾಪುರ ಫೆರಿ ರಸ್ತೆ ಯಿಂದ ಕುಂದಾಪುರ ಸಂಗಮ್ ತನಕ ಇದೆ. ರಸ್ತೆಯ ಉದ್ದಕ್ಕೂ 4 ತಿರುವುನಲ್ಲಿ ಹಂಪ್ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ರಸ್ತೆಗಳು ವಿಶಾಲವಾಗಿರುವುದರಿಂದ ವಾಹನಗಳ ವೇಗವೂ ಜಾಸ್ತಿಯಾಗಿದೆ.

ಕಾಮಗಾರಿ ಈ ತಿಂಗಳಲ್ಲಿ ಪೂರ್ಣವಾಗಬಹುದು. ಉಳಿಕೆ ಕಾಮಗಾರಿಗಳನ್ನು ಮಾ.15ರ ಒಳಗೆ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ತಿಳಿಸಲಾಗಿದ್ದು ಆಗಾಗ ಪರಿಶೀಲಿಸಲಾಗಿದೆ.