ಅಮೃತೇಶ್ವರಿ 
ಉಡುಪಿ

ಕೋಟ ಅಮೃತೇಶ್ವರಿ ದೇಗುಲದಲ್ಲಿ ಜಾತ್ರೋತ್ಸವ ಸಂಭ್ರಮ

 ಕೋಟ: ಕೋಟದ ಹಲವು ಮಕ್ಕಳ ತಾಯಿ ಎಂದೇ ಹೆಸರುವಾಸಿಯಾದ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಜ.9ರಿಂದ 11ರವರೆಗೆ ಜಾತ್ರೋತ್ಸವ ನಡೆಯಲಿದೆ. 

10, 11ರಂದು ಹಾಲು ಹಬ್ಬ, ತುಲಾಭಾರ 

9ರಂದು ಪ್ರತಿಷ್ಠಾಪನಾ ವರ್ಧಂತಿ, 10 ಮತ್ತು 11ರಂದು ವಾರ್ಷಿಕ ಹಾಲು ಹಬ್ಬ, ಗೆಂಡೋತ್ಸವ, ತುಲಾಭಾರ ಸೇವೆ ನಡೆಯಲಿದೆ. 9ರಂದು ಬೆಳಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಪಂಚವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ, ಪರಿವಾರ ದೇವರಿಗೆ ನವಕ ಪ್ರಧಾನ ಕಲಾಧಿವಾಸ ಹೋಮ, 10ರಂದು ಪಂಚಗವ್ಯ ಪೂಜೆ,  ರಾತ್ರಿ 7ಕ್ಕೆ ನಾಗದೇವರ ಹಾಲಿಟ್ಟು ಸೇವೆ, ರಾತ್ರಿ 7.30ಕ್ಕೆ ಗೆಂಡಸೇವೆ, 9ಕ್ಕೆ ಅಮ್ಮನವರ ಹಾಗೂ ಬೊಬ್ಬರ್ಯ ದೇವರ ಹಾಲಿಟ್ಟು ಸೇವೆ, ಮಧ್ಯಾಹ್ನ 12.30ಕ್ಕೆ ಹಾಗೂ 10ರಂದು ರಾತ್ರಿ ಗೆಂಡಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. 
11ರಂದು ಬೆಳಗ್ಗೆ 6ಕ್ಕೆ ಢಕ್ಕೆಬಲಿ ಸೇವೆ, ಬೆಳಗ್ಗೆ 9.30ಕ್ಕೆ ದರ್ಶನ ಸೇವೆ ನಂತರ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಯಕ್ಷಗಾನ ಸೇವೆ ನಡೆಯಲಿದೆ ಎಂದು ದೇಗುಲ ಅಧ್ಯಕ್ಷ ಆನಂದ್ ಸಿ.ಕುಂದರ್ ತಿಳಿಸಿದ್ದಾರೆ. 

ಕ್ಷೇತ್ರದ ಮಹತ್ವ

 ಹಲವು ಮಕ್ಕಳ ತಾಯಿಯ ಪರಿವಾರ ದೇವತೆಗಳಾದ ವೀರಭದ್ರ ಗುಡಿ, ನಾಗ ಬನ, ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ, ಪಂಜುರ್ಲಿ ದೈವಗಳಿದ್ದು ಭಕ್ತರಿಗೆ ಆರಾಧ್ಯ ದೈವಗಳಾಗಿವೆ. ಸನಿಹದಲ್ಲಿ ವರ್ಣತೀರ್ಥ ಕೆರೆಯೂ ಇದ್ದು, ಹಿರಿಯರು ಹೇಳುವಂತೆ ಕೆರೆಯ ಮಧ್ಯದ ನೀರಿನಲ್ಲಿ ಒಂದು ಲಿಂಗ ಉದ್ಭವಿಸಿದ್ದು ಒಂದು ವಿಶೇಷ. ಈ ಕೆರೆ ನೀರಿನಿಂದ ಪ್ರತಿ ದಿನ ದೇವಿಗೆ ಅಭಿಷೇಕ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಜತೆಗೆ ವರ್ಷಂಪ್ರತಿ ದೀಪೋತ್ಸವ ಕೂಡ ನಡೆಯುತ್ತದೆ.

ಅಭಿವೃದ್ಧಿ ಯೋಜನೆಗಳು: 

ದೇವಸ್ಥಾನದ ಅಭಿವೃದ್ಧಿಗೆ ಸಮಿತಿ ರಚಿಸಿ ಸ್ವಾಗತ ಗೋಪುರ ರಚನೆ, ಮುಖ ಮಂಟಪ, ಸುಸಜ್ಜಿತ ಭೋಜನ ಶಾಲೆ ನಿರ್ವಾಣ, ನಿತ್ಯ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. 

ಜೋಗಿ ಸಮಾಜದ ಅರ್ಚಕರು

 ಕೋಟ ಅಮೃತೇಶ್ವರಿ ದೇವಳದಲ್ಲಿ ಪೂಜಾ ಕೈಂಕರ್ಯವನ್ನು ಜೋಗಿ ಸಮಾಜದ ಅರ್ಚಕರು ನಡೆಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಮೂರು ತಿಂಗಳಿಗೆ ಪರ್ಯಾಯ ರೀತಿಯಲ್ಲಿ ಒಂದೊಂದು ಮನೆತನದವರು ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಪಂಚಾಮೃತ ಅಭಿಷೇಕ, ಸೀರೆ ಉಡಿಸುವುದು, ಕುಂಕುವಾರ್ಚನೆ, ಹಾಲು ಪರವಾನ್ನ, ಗೆಂಡ ಸೇವೆ, ಹಲವು ಮಕ್ಕಳಿಗೆ ಎಣ್ಣೆ ಅರ್ಚನೆ, ಹುರುಳಿ ಚೆಲ್ಲುವುದು, ಅಮೃತ ನೈವೇದ್ಯ, ಕರ್ಪೂರ ಆರತಿ, ವಾಹನ ಪೂಜೆ, ರಕ್ತೇಶ್ವರಿಗೆ ಕೋಳಿ ಬಲಿ ಮುಂತಾದ ಸೇವೆಗಳು ಇಲ್ಲಿ ದಿನನಿತ್ಯ ನಡೆಯುತ್ತವೆ.

 ಯಕ್ಷಗಾನ ಬೆಳಕಿನ ಸೇವೆ ಮಹತ್ವ 

ದೇವಸ್ಥಾನದ ಪ್ರಮುಖವಾದ ಹರಕೆ ಬೆಳಕಿನ ಸೇವೆ ಯಕ್ಷಗಾನ. ಯಕ್ಷಗಾನ ಕಲಾಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದ ಅಮೃತೇಶ್ವರಿ ಮೇಳ 1932ರಲ್ಲಿ ಆರಂಭವಾಯಿತು. ಸಾಸ್ತಾನದ ದಿ.ಶ್ರೀನಿವಾಸರ ಮುಂದಾಳತ್ವದಲ್ಲಿ ಮೇಳ ಆರಂಭವಾಯಿತು. ಎಷ್ಟೋ ಜನ ಮಕ್ಕಳಿಲ್ಲದವರು ಈ ಹರಕೆ ಹೊತ್ತ ಬಳಿಕ ಸಂತಾನಭಾಗ್ಯ ಪಡೆದಿದ್ದಾರೆ. ದೇವಿಗೆ ಸರ್ವಾಲಂಕಾರ ಪೂಜೆ, ಹೂವಿನಪೂಜೆ, ಎಣ್ಣೆ ಅಭಿಷೇಕ, ತುಲಾಭಾರ ಸೇವೆ, ಹರಿವಾಣ ನೈವೇದ್ಯ, ಸೋಣೆ ಆರತಿ ನಡೆಯುತ್ತದೆ.