ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲಾ ಆವರಣದಲ್ಲಿನ ಮರಗಳ ದೃಶ್ಯ. 
ಉಡುಪಿ

ಉಪ್ಪಿನಂಗಡಿ ಶಾಲಾ ಆವರಣದ ವೃಕ್ಷಗಳ ಬಗ್ಗೆ ಭೀತಿ

ಉಪ್ಪಿನಂಗಡಿ: ಬುಧವಾರ ಬಂಟ್ವಾಳ ತಾಲೂಕಿನಲ್ಲಿ ರಸ್ತೆ ಬದಿಯ ಮರ ಗಾಳಿ-ಮಳೆಗೆ ಶಾಲಾ ವಾಹನದ ಮೇಲೆ ಬಿದ್ದು ಪುಟಾಣಿ ಕಂದಮ್ಮವೊಂದು ಸಾವನ್ನಪ್ಪಿದ ಘಟನೆಯ ಬಳಿಕ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲಾ ಬಳಿಯ ಮರಗಳ ಬಗ್ಗೆ ನಾಗರಿಕರಿಂದ ಕಳವಳ ಮೂಡಿದೆ.
ಪ್ರಸಕ್ತ 190 ವರ್ಷಗಳ ಗತ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಈ ಹಿಂದೆ ಮುಖ್ಯಶಿಕ್ಷಕರಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಐತ್ತಪ್ಪ ನಾಯ್ಕ ಶಾಲಾ ಆವರಣದಲ್ಲಿ ನೆರಳು ಒದಗಿಸುವ ನಿಟ್ಟಿನಲ್ಲಿ ಶಾಲಾ ಆವರಣದ ಉದ್ದಕ್ಕೂ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳು ಇದೀಗ ಬೆಳೆದು ಹೆಮ್ಮರವಾಗಿದ್ದು, ಹಲವಾರು ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಮಾತ್ರವಲ್ಲದೆ ಬೇಸಗೆಯಲ್ಲಿ ಬಹಳಷ್ಟು ನೆರಳು ನೀಡುತ್ತಿವೆ.
ಇದೀಗ ಮರವೊಂದು ಮಗುವೊಂದರ ಜೀವವನ್ನು ಬಲಿ ತೆಗೆದುಕೊಂಡ ಬಳಿಕ ಈ ಶಾಲಾ ಮರಗಳ ಬಗ್ಗೆಯೂ ಭೀತಿ ಮೂಡಲಾರಂಭಿಸಿದೆ. ವೃಕ್ಷ ಸಂಪತ್ತಿನ ಮಹತ್ವದ ಜತೆಗೆ ನಾಗರಿಕ ಜೀವ ರಕ್ಷಣೆಯೂ ಮುಖ್ಯವಾಗಿದ್ದು, ಪದೇಪದೆ ಬೀಸಿ ಬರುವ ಗಾಳಿ-ಮಳೆಗೆ ಇಲ್ಲಿನ ಮರಗಳು ಧರೆಗುರುಳಿದರೆ ಸನಿಹದಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬಿದ್ದು ದೊಡ್ಡ ಮಟ್ಟಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮಕ್ಕಳಾದಿಯಾಗಿ ಜನರ ಸುರಕ್ಷತೆಯ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕೆಂದು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ ಆಗ್ರಹಿಸಿದ್ದಾರೆ.