ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಣೂರು ಜಯರಾಂ ಶೆಟ್ಟಿ ಮಾತನಾಡಿದರು. ಮಂಜುನಾಥ್​ ಗಿಳಿಯಾರು, ತಿಮ್ಮ ಕಾಂಚನ್​, ರಮೇಶ್​ ಮೆಂಡನ್​, ಸುಭಾಸ್​ ಶೆಟ್ಟಿ ಗಿಳಿಯಾರು, ಮಹಾಬಲ ಪೂಜಾರಿ, ನಿತ್ಯಾನಂದ ಶೆಟ್ಟಿ, ಮಹೇಶ್​ ಶೆಟ್ಟಿ ಮಣೂರು, ಶರಣಯ್ಯ ಹಿರೇಮಠ್​, ಗುರುರಾಜ್​ ಆಚಾರ್​ ಇದ್ದರು. 
ಉಡುಪಿ

ಹೊಳೆ ಹೂಳೆತ್ತಲು ರೈತರಿಂದ 15 ದಿನ ಗಡುವು

* ಕ್ರಮ ಕೈಗೊಳ್ಳದಿದ್ದಲ್ಲಿ ಬ್ರಹ್ಮಾವರದಲ್ಲಿ ಪ್ರತಿಭಟನೆ

* ತಹಸೀಲ್ದಾರ್​ ಕಚೇರಿ ಮುಂದೆ ಧರಣಿ ಎಚ್ಚರಿಕೆ

ಉಡುಪಿ: ಬ್ರಹ್ಮಾವರ ತಾಲೂಕಿನ ಮಣೂರು, ಕೈಕೂರು, ಗಿಳಿಯಾರು, ಚಿತ್ರಪಾಡಿ, ಕಾರ್ಕಡ ಮತ್ತು ಕಾವಡಿ ಗ್ರಾಮದಲ್ಲಿ ಹಾದು ಹೋಗಿರುವ ಸೂಲಡ್ಪು-ಮಡಿವಾಳ ಸಾಲು ಹೊಳೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದೆ. ಅಲ್ಲದೆ, ಈ ಭಾಗದಲ್ಲಿ ಅತಿ ಕಿರಿದಾದ ಸೇತುವೆ ಇದ್ದು ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ ಹೊಳೆ ಪಾತ್ರದ ನೂರಾರು ಎಕರೆ ಕೃಷಿ ನಾಶವಾಗುತ್ತಿದೆ. ಕಳೆದ 4 ವರ್ಷದಿಂದ ಹೊಳೆಯ ಹೂಳೆತ್ತಿ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮುಂದಿನ 15 ದಿನದಲ್ಲಿ ಹೊಳೆಯ ಹೂಳೆತ್ತದಿದ್ದಲ್ಲಿ ಬ್ರಹ್ಮಾವರ ತಹಸೀಲ್ದಾರ್​ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ರೈತಧ್ವನಿ ಕೋಟ (ರಿ.) ಉಡುಪಿ ಜಿಲ್ಲೆಯ ಅಧ್ಯಕ್ಷ ಮಣೂರು ಜಯರಾಂ ಶೆಟ್ಟಿ ಎಚ್ಚರಿಕೆ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶುಕ್ರವಾರ (ಡಿ.26) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಳೆಯ ಹೂಳೆತ್ತುವಂತೆ ಆಗ್ರಹಿಸಿ ಸಂಘಟನೆಯ ವತಿಯಿಂದ ನಿರಂತರ ಹೋರಾಟ ಮಾಡುತ್ತಲೇ ಇದ್ದೇವೆ. ಎಲ್ಲ ಜನಪ್ರತಿನಿಧಿಗಳಿಗೂ ಕಾಲಕಾಲಕ್ಕೆ ಮನವಿ ನೀಡುತ್ತಲೇ ಇದ್ದೇವೆ. ಆದರೆ, ಯಾರೂ ಸ್ಪಂದಿಸದ ಕಾರಣದಿಂದ ಹಾಗೂ ರೈತರ ಹಿತ ಕಾಯುವ ನಿಟ್ಟಿನಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಅಧಿಕಾರಿಗಳ ನಿರ್ಲಕ್ಷ್ಯ

ಸಂಘಟನೆಯ ಕಾನೂನು ಸಲಹೆಗಾರ ಮಂಜುನಾಥ್​ ಗಿಳಿಯಾರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾರ್ಗದರ್ಶನದಂತೆ ಡಿ.16ರಂದು ರೈತ ನಿಯೋಗವು ಬೆಳಗಾವಿಗೆ ತೆರಳಿ, ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ರೈತರಿಗೆ ಅಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿದ್ದೆವು. ಕೂಡಲೇ ಶಿವಕುಮಾರ್​ ಅವರು, ವಾರಾಹಿ ಯೋಜನೆಯಡಿ 4.5 ಕೋಟಿ ರೂ. ಅನುದಾನದಲ್ಲಿ ಹೊಳೆಯ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಆದರೆ, ಸಂಬಂಧಿತ ಅಧಿಕಾರಿಗಳು ಇನ್ನೂ ಟೆಂಡರ್​ ಕರೆಯದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ತಿಮ್ಮ ಕಾಂಚನ್​, ಸದಸ್ಯರಾದ ರಮೇಶ್​ ಮೆಂಡನ್​, ಸುಭಾಸ್​ ಶೆಟ್ಟಿ ಗಿಳಿಯಾರು, ಮಹಾಬಲ ಪೂಜಾರಿ, ನಿತ್ಯಾನಂದ ಶೆಟ್ಟಿ, ಮಹೇಶ್​ ಶೆಟ್ಟಿ ಮಣೂರು, ಶರಣಯ್ಯ ಹಿರೇಮಠ್​, ಗುರುರಾಜ್​ ಆಚಾರ್​ ಇದ್ದರು.

ದನ-ಕರುಗಳೊಂದಿಗೆ ಮುತ್ತಿಗೆ ಹಾಕ್ತೇವೆ

ನಮ್ಮ ಹೋರಾಟ ಸರ್ಕಾರ ಅಥವಾ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧವಲ್ಲ. ಇದು ಸಮಸ್ತ ರೈತರ ಹಿತಾಸಕ್ತಿಗಾಗಿ ನಡೆಸಲಿರುವ ಹೋರಾಟ. 4 ವರ್ಷದಿಂದ ರೈತರೆಲ್ಲರೂ ಕಾದಿದ್ದಾರೆ. ವ್ಯಾಪ್ತಿಯ ಎಲ್ಲ ಗ್ರಾಪಂ ಸಭೆಯಲ್ಲೂ ಹೂಳೆತ್ತಲು ನಿರ್ಣಯಿಸಲಾಗಿದೆ. ಆದರೆ, ಯಾವುದೇ ಕ್ರಮ ಆಗುತ್ತಿಲ್ಲ. ಇನ್ನು ಕಾಯುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗೆ, ಜಿಲ್ಲಾ ಪೊಲೀಸ್​ ವರಿಷ್ಠರಿಗೂ ನಮ್ಮ ಮನವಿ ಸಲ್ಲಿಸಿದ್ದೇವೆ. 15 ದಿನದಲ್ಲಿ ಹೂಳೆತ್ತುವ ಕಾಮಗಾರಿ ನಡೆಯದಿದ್ದಲ್ಲಿ ದನ-ಕರುಗಳೊಂದಿಗೆ ತಹಸೀಲ್ದಾರ್​ ಕಚೇರಿಗೆ ಹಾಗೂ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೂ ಮುತ್ತಿಗೆ ಹಾಕುತ್ತೇವೆ. ಜಿಲ್ಲೆಗೆ ಬರುವ ಸಚಿವರಿಗೂ ಕಪ್ಪು ಪಟ್ಟಿ ಪ್ರದರ್ಶಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.