ನೀರಿಲ್ಲದೆ ಸೊರಗುತ್ತಿರುವ ಕೃಷಿ ಭೂಮಿ.
ಬ್ರಹ್ಮಾವರ: ಬಹುತೇಕ ಕರ್ಕಾಟಕ ಸಂಕ್ರಮಣದ ಒಳಗೆ ಕೃಷಿ ಚಟುವಟಿಕೆ ಮುಕ್ತಾಯದ ಹಂತಕ್ಕೆ ಬಂದು, ಜೀವನದಿಗಳಾದ ಸೀತಾ, ಸ್ವರ್ಣ ಮತ್ತು ಮಡಿಸಾಲು ಹೊಳೆಯಲ್ಲಿ ಪ್ರವಾಹ ಬಂದು ತುಂಬಿ ಹರಿಯಬೇಕಾದ ಸಮಯದಲ್ಲಿ ನದಿ ತೀರದ ಕೃಷಿಕರೆ ಭತ್ತದ ಬೇಸಾಯ ಮಾಡಲು ಆಗದೆ ಕಂಗೆಟ್ಟಿದ್ದಾರೆ.
ಬ್ರಹ್ಮಾವರ ತಾಲೂಕು ನದಿತೀರ ಭಾಗವಾದ ಬಾರಕೂರು, ಕೂರಾಡಿ, ಹನೆಹಳ್ಳಿ, ಹಂದಾಡಿ, ಮಟಪಾಡಿ, ನೀಲಾವರ ಎಳ್ಳಂಪಳ್ಳಿ ಭಾಗದ ನದಿ ತೀರದ ಭತ್ತ ಬೆಳೆಯುವ ಕೃಷಿಕರು ಪ್ರತಿ ವರ್ಷ ಪ್ರಕೃತಿಯನ್ನು ನಂಬಿ ಸಮಯಕ್ಕೆ ಸರಿಯಾಗಿ ಭೂಮಿಯನ್ನು ಹದಮಾಡಿ, ಉಳುಮೆ, ಬಿತ್ತನೆ ಮಾಡಿದ ಭತ್ತದ ಸಸಿಗಳನ್ನು ನಿಗದಿತ ದಿನಕ್ಕೆ ನಾಟಿ ಮಾಡುತ್ತಿದ್ದರು. ಆದರೆ ಪ್ರಸ್ತುತ ಇದು ಸಾಧ್ಯವಾಗದೆ ಕೃಷಿ ಭೂಮಿಗಳು ನೀರಿಲ್ಲದೆ ಸೊರಗುತ್ತಿರುವುದು ಕಂಡುಬರುತ್ತಿದೆ.
ಕೆಲವೊಂದು ಕಡೆಗಳಲ್ಲಿ ಕೂಲಿಯಾಳುಗಳ ಮೂಲಕ ಸಾಂಪ್ರದಾಯಕ ನಾಟಿ ಮಾಡುತ್ತಿರುವುದು, ಇನ್ನು ಕೆಲವು ಭಾಗದಲ್ಲಿ ಭತ್ತವನ್ನು ಮೊಳಕೆ ಮಾಡಿ ಬಿತ್ತನೆ ಮಾಡುತ್ತಿರುವುದು ಕಂಡುಬರುತ್ತಿವೆ. ಈಗಾಗಲೆ ನಾಟಿ ಮಾಡಿದ ಗದ್ದೆಯಲ್ಲಿ ನೀರು ಇಲ್ಲದೆ ಒಣಗುತ್ತಿವೆ. ಸಂಕ್ರಮಣ ಅಮಾವಾಸ್ಯೆಗೆ ಭಾರಿ ಮಳೆ ಬರುವ ಕೃಷಿಕರ ಎಲ್ಲ ಲೆಕ್ಕಾಚಾರಕ್ಕೆ ಪ್ರಕೃತಿ ಮುನಿದಂತೆ ಕಾಣುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ.