ಉಡುಪಿಯ ಎಂಜಿಎಂ ಕಾಲೇಜ್​ನ ಪ್ರಾಂಶುಪಾಲೆ ಹುದ್ದೆಯಿಂದ ನಿವೃತ್ತರಾದ ಪ್ರೊ.ವನಿತಾ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಪತಿ ಗಣೇಶ್​ ಮಯ್ಯ, ಡಾ.ಟಿ.ಸತೀಶ್​ ಯು. ಪೈ, ಡಾ. ಕೆ.ಶ್ರೀಧರ್​ ಆರ್​. ಪೈ, ಡಾ.ಗಾಯತ್ರಿ ಪೈ, ಪ್ರೊ.ಮಾಲತಿದೇವಿ, ಡಾ. ದೇವಿದಾಸ್​ ಎಸ್​. ನಾಯ್ಕ, ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್​ ಶೆಟ್ಟಿ ಇತರರಿದ್ದರು. 
ಉಡುಪಿ

ಕೃಷ್ಣಾರ್ಜುನರಂತಿರಲಿ ಗುರು-ಶಿಷ್ಯರ ಸಂಬಂಧ

* ಡಾ.ಶ್ರೀಧರ್​ ಆರ್​. ಪೈ ಆಶಯ

* ಪ್ರೊ. ವನಿತಾ ಮಯ್ಯ ಬೀಳ್ಕೊಡುಗೆ ಸಮಾರಂಭ

ಉಡುಪಿ: ಕೃಷ್ಣ ಮತ್ತು ಅರ್ಜುನರು ಸಮಯದ ಅಗತ್ಯಕ್ಕೆ ತಕ್ಕಂತೆ ಸ್ನೇಹಿತ, ಸಹೋದರ ಹಾಗೆಯೇ ಗುರುಗಳಾಗುತ್ತಿದ್ದರು. ಶಿಕ್ಷಕರೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮಾನರು. ವಿದ್ಯಾರ್ಥಿಗಳು ವರ್ಷಕ್ಕೊಮ್ಮೆಯಾದರೂ ತಮ್ಮ ಗುರುಗಳನ್ನು ನೆನೆದು ಮಾತನಾಡಿಸಬೇಕು. ಗುರು-ಶಿಷ್ಯರಸಂಬಂಧ ಕೃಷ್ಣಾರ್ಜುನರಂತೆ ಇರಬೇಕು ಎಂದು ಅಕಾಡೆಮಿ ಆಫ್​ ಜನರಲ್​ ಎಜುಕೇಷನ್​ನ ಆಡಳಿತಾಧಿಕಾರಿ ಡಾ. ಕೆ.ಶ್ರೀಧರ್​ ಆರ್​. ಪೈ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜ್​ನ ನೂತನ ರವೀಂದ್ರ ಮಂಟಪದಲ್ಲಿ ಕಾಲೇಜ್​ನ 21ನೇ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ವನಿತಾ ಮಯ್ಯ ಅವರ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಸಹೋದ್ಯೋಗಿ ಪ್ರಾಧ್ಯಾಪಕರು ಹಾಗೂ ಕಾಲೇಜ್​ ವಿದ್ಯಾರ್ಥಿಗಳು ಪ್ರೊ.ವನಿತಾ ಅವರ ಕಾಳಜಿ, ಸಮಯಪಾಲನೆಯ ಮಹತ್ವ, ಸಹಾಯ, ಸಹಾನುಭೂತಿಯ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜ್​ ಟ್ರಸ್ಟ್​ ಅಧ್ಯಕ್ಷ ಡಾ.ಟಿ.ಸತೀಶ್​ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ವನಿತಾ ಅವರ ಪತಿ ಗಣೇಶ್​ ಮಯ್ಯ, ನಿಯೋಜಿತ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ, ಪ.ಪೂ. ಕಾಲೇಜ್​ನ ಪ್ರಾಂಶುಪಾಲೆ ಪ್ರೊ.ಮಾಲತಿದೇವಿ, ಸಂಧ್ಯಾ ಕಾಲೇಜ್​ನ ಪ್ರಾಂಶುಪಾಲ ಡಾ. ದೇವಿದಾಸ್​ ಎಸ್​. ನಾಯ್ಕ, ಐಕ್ಯುಎಸಿ ಸಂಯೋಜಕಿ ಪ್ರೊ.ಶೈಲಜಾ ಎಚ್​., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್​ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ.ಪೂ. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಅಶ್ವಿನಿ ಶೆಟ್ಟಿ, ಕಾಲೇಜ್​ನ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಂ.ಚೆನ್ನ ಪೂಜಾರಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.