ಉಡುಪಿಯ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ದಂಪತಿಯನ್ನು ಸನ್ಮಾನಿಸಲಾಯಿತು. ಕೆ.ಎಸ್. ಜ್ಯೋತಿಶ್ರೀ, ಕಿರಣ್ ಎಸ್. ಗಂಗಣ್ಣನವರ್, ಸಮೀವುಲ್ಲಾ, ಯೋಗಿಶ್ ಪಿ.ಆರ್., ಸಂತೋಷ್ ಶ್ರೀವಾಸ್ತವ್, ಮನು ಪಟೇಲ್, ಶ್ವೇತಾಕ್ಷಿ, ದೇವದಾಸ್ ಶೆಟ್ಟಿಗಾರ್, ಜಲಜಾ ಪೂಜಾರ್ತಿ ಇತರರಿದ್ದರು.
* ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಆಶಯ
* ನಿವೃತ್ತ ನ್ಯಾಯಾಧೀಶರಿಗೆ ಬೀಳ್ಕೊಡುಗೆ
ಉಡುಪಿ: ತಾಯಿ, ಸಹೋದರಿ, ಮಡದಿ, ಪುತ್ರಿಯಾಗಿ ಕುಟುಂಬದಲ್ಲಿ ಇರುತ್ತಿದ್ದ ಮಹಿಳೆ ಇಂದು ವಿವಿಧ ಉನ್ನತ ಸ್ಥರದ ಅಧಿಕಾರಿಯಾಗಿ ಸೂಕ್ತವಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾಳೆ. ಕುಟುಂಬದ ಜವಾಬ್ದಾರಿ ಇದ್ದರೂ ಸಹ ಎಲ್ಲ ಕ್ಷೇತ್ರಗಳಲ್ಲೂ ಪುರುಷರಂತೆ ಕೆಲಸ ನಿರ್ವಹಿಸುತ್ತ ದೇಶದ ಹಿತ ಕಾಯುತ್ತಿದ್ದಾಳೆ. ಹೀಗಾಗಿ ಮಹಿಳೆಗೆ ಸಾಮಾಜಿಕ ಗೌರವ ಲಭಿಸಬೇಕಿದೆ ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶೆ ಕೆ.ಎಸ್. ಜ್ಯೋತಿಶ್ರೀ ಆಶಯ ವ್ಯಕ್ತಪಡಿಸಿದರು.
ಉಡುಪಿ ವಕೀಲರ ಸಂಘದ ವತಿಯಿಂದ ಕೋರ್ಟ್ನ ಸಭಾಂಗಣದಲ್ಲಿ ಆಯೋಜಿಸಿದ್ದ ನಿವೃತ್ತ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಅವರ ಬೀಳ್ಕೊಡುಗೆ ಹಾಗೂ ಮಹಿಳಾ ದಿನಾಚರಣೆ ನಿಮಿತ್ತ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಕಾರ್ಯ ನಿರ್ವಹಿಸುವ ಜಲಜಾ ಪೂಜಾರ್ತಿ ಅವರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾಕ್ಷಿ ಶುಭ ಹಾರೈಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಸಮೀವುಲ್ಲಾ, ನ್ಯಾಯಧೀಶರಾದ ಯೋಗಿಶ್ ಪಿ.ಆರ್., ಸಂತೋಷ್ ಶ್ರೀವಾಸ್ತವ್, ಮನು ಪಟೇಲ್, ವಕೀಲರ ಸಂಘದ ಉಪಾಧ್ಯಕ್ಷ ದೇವದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸಾವಿತ್ರಿ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಂದಿಸಿದರು.
ನ್ಯಾಯಾಂಗ ಕ್ಷೇತ್ರದಲ್ಲಿ 23 ವರ್ಷಗಳ ಕಾಲ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಸೇವಾ ಅವಧಿಯಲ್ಲಿ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ನ್ಯಾಯದಾನ ಮಾಡಿದ ತೃಪ್ತಿ ಇದೆ.