ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ನ ರಾಜೇಂದ್ರ ಚಕ್ಕೇರಾ ಅವರಿಗೆ ತನುಶ್ರೀ ಪಿತ್ರೋಡಿ 1.5 ಲಕ್ಷ ರೂ. ಧನಸಹಾಯ ನೀಡಿದರು. ಹರಿನಾರಾಯಣ ಭಂಡಿ, ಜಗದೀಶ್ ಕುಮಾರ್, ಯೋಗೀಶ್ ಕೋಟ್ಯಾನ್, ಜಿತೇಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ, ಸಿಸ್ಟರ್ ಮಯೋಲಾ, ಉದಯ್ ಪಿತ್ರೋಡಿ, ಸಂಧ್ಯಾ ಪಿತ್ರೋಡಿ, ರೀತುಶ್ರೀ ಇತರರಿದ್ದರು.
* ರಾಜೇಂದ್ರ ಚಕ್ಕೇರಾ ಶ್ಲಾಘನೆ
* 1.5 ಲಕ್ಷ ರೂ. ಧನ ಸಹಾಯ ಸ್ವೀಕಾರ
ಉಡುಪಿ: ಗೋವಿನಲ್ಲಿ ಎಲ್ಲ ದೇವರುಗಳ ಸನ್ನಿಧಿ ಇರುತ್ತದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಒಂದು ಗೋವನ್ನು ಪೂಜಿಸಿದರೆ ಅಥವಾ ಸೇವೆ ಮಾಡಿದರೆ ಸಕಲ ದೇವರ ಆರಾಧನೆ ಮಾಡಿದಂತಾಗುತ್ತದೆ. ಯೋಗದಿನದ ನಿಮಿತ್ತ ಯೋಗ ಪ್ರದರ್ಶನದ ಮೂಲಕ ಹಣ ಸಂಗ್ರಹಿಸಿ ಗೋಶಾಲೆಯ ನಿರ್ವಹಣೆಗೆ 1.5 ಲಕ್ಷ ರೂ. ನೀಡಿದ ಯೋಗಬಾಲೆ ತನುಶ್ರೀ ಪಿತ್ರೋಡಿ ಅವರ ಕಾರ್ಯ ಅನನ್ಯ ಮತ್ತು ಮಾದರಿ ಎಂದು ನಂಚಾರು ಕಾಮಧೇನು ಗೋಶಾಲಾ ಟ್ರಸ್ಟ್ನ ಮುಖ್ಯಸ್ಥ ರಾಜೇಂದ್ರ ಚಕ್ಕೇರಾ ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಉದ್ಯಾವರದ ಬಿಲ್ಲವ ಮಹಾಜನ ಸಂಘದ ಸಭಾಭವನದಲ್ಲಿ ಸಂಧ್ಯೋದಯ ಪಿತ್ರೋಡಿ ಬಳಗದ ವತಿಯಿಂದ ಭಾನುವಾರ (ಜೂ.21) ಆಯೋಜಿಸಿದ್ದ "ಯೋಗದೊಂದಿಗೆ ಗೋ ಸೇವೆ' ಕಾರ್ಯಕ್ರಮದಲ್ಲಿ 11 ಬಾರಿ ವಿಶ್ವದಾಖಲೆ ಮಾಡಿರುವ ಯೋಗಬಾಲೆ ತನುಶ್ರೀ ಪಿತ್ರೋಡಿ ಅವರಿಂದ 1.5 ಲಕ್ಷ ರೂ. ಧನ ಸಹಾಯ ಸ್ವೀಕರಿಸಿ ಮಾತನಾಡಿದರು.
ಯೋಗ ಗುರುಗಳಾದ ಹರಿನಾರಾಯಣ ಭಂಡಿ, ಜಗದೀಶ್ ಕುಮಾರ್ ಅವರನ್ನು ಯೋಗ ದಿನದ ನಿಮಿತ್ತ ಸನ್ಮಾನಿಸಿ ಗೌರವಿಸಲಾಯಿತು.
ಗೋಸೇವೆಗಾಗಿ ಯೋಗ ಪ್ರದರ್ಶಿಸಿದ ತನುಶ್ರೀ ಪಿತ್ರೋಡಿ. ಯೋಗೀಶ್ ಕೋಟ್ಯಾನ್ ಉದ್ಯಾವರ, ಬಿಜೆಪಿ ಮುಖಂಡ ಜಿತೇಂದ್ರ ಶೆಟ್ಟಿ ಉದ್ಯಾವರ, ನಗರಸಭಾ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ನಾಟ್ಯ ಗುರು ರಾಮಕೃಷ್ಣ ಕೊಡಂಚ, ನಾಗೇಶ್ ಕುಮಾರ್ ಉದ್ಯಾವರ, ಸಿಸ್ಟರ್ ಮಯೋಲಾ, ಗಂಗಾಧರ್ ಕರ್ಕೇರ, ಪ್ರಕಾಶ್ ಕೋಟ್ಯಾನ್, ರಾಘವೇಂದ್ರ ದೇವಾಡಿಗ, ವಿಜಯ್ ಕೋಟ್ಯಾನ್, ಉದಯ್ ಪಿತ್ರೋಡಿ ಹಾಗೂ ಸಂಧ್ಯಾ ದಂಪತಿ, ರೀತುಶ್ರೀ ಇತರರು ಉಪಸ್ಥಿತರಿದ್ದರು.
ನಾಗರಾಜ್ ರಾವ್ ವರ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.
ಆಮಂತ್ರಣ ಪತ್ರಿಕೆಯಲ್ಲಿ ಕ್ಯುಆರ್ ಕೋಡ್ ಬಳಕೆ
ನಂಚಾರು ಕಾಮಧೇನು ಗೋಶಾಲಾ ಟ್ರಸ್ಟ್ಗೆ ಸಹಾಯಧನ ನೀಡುವ ಉದ್ದೇಶದಿಂದಲೇ ತನುಶ್ರೀ ಅವರ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು. ಅದಕ್ಕಾಗಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಕಾರ್ಯಕ್ರಮಕ್ಕೆ ಆಗಮಿಸುವಂತೆ ಹಾಗೂ ಗೋವುಗಳಿಗಾಗಿ ಧನ ಸಹಾಯ ಮಾಡುವಂತೆ ಕ್ಯುಆರ್ ಕೋಡ್ ಅಳವಡಿಸಲಾಗಿತ್ತು. ಅನೇಕರು ಕ್ಯುಆರ್ ಕೋಡ್ ಮೂಲಕ ಧನ ಸಹಾಯ ಮಾಡಿದ್ದು, ಸಂಗ್ರಹವಾಗಿದ್ದ ಹಣವನ್ನು ಗೋ ಸೇವೆಗೆ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ದನ-ಕರುವಿಗೆ ಪುಷ್ಪಹಾರ ಹಾಕಿ ನಮಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ತನುಶ್ರೀ 50 ನಿಮಿಷದಲ್ಲಿ 300 ಆಸನ ಪ್ರದರ್ಶಿಸಿದರು.
"
ಕಾಮಧೇನು ಗೋಶಾಲೆಯಲ್ಲಿ 350ಕ್ಕೂ ಹೆಚ್ಚು ಗೋವುಗಳಿವೆ. ಅದರಲ್ಲಿ ಕೇವಲ 10ರಿಂದ 15 ಹಸುಗಳು ಮಾತ್ರ ಹಾಲು ಕೊಡುತ್ತವೆ. ಉಳಿದವುಗಳು ಅನಾರೋಗ್ಯಪೀಡಿತ, ವಿಕಲಾಂಗ ಹೊಂದಿದ ಗೋವುಗಳೇ ಅಧಿಕವಿದೆ. ಗೋವು ಪಾಲನೆ ಕಾರ್ಯ ಸುಲಭವಲ್ಲ. ಹೀಗಾಗಿ ಯೋಗ ದಿನದ ನಿಮಿತ್ತ ಗೋಸೇವೆ ಮಾಡಬೇಕೆಂದು ಸಂಕಲ್ಪಿಸಿ ಅದಕ್ಕಾಗಿ ತಿಂಗಳ ಮೊದಲೇ ಸಿದ್ಧತೆ ಮಾಡಲಾಗಿತ್ತು. ಸಂಗ್ರಹಿತ ಹಣವನ್ನು ಗೋಶಾಲೆಯ ನಿರ್ವಹಣೆಗೆ ನೀಡಿ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ.
— ತನುಶ್ರೀ ಪಿತ್ರೋಡಿ. ಖ್ಯಾತ ಯೋಗಬಾಲೆ.