ಯಕ್ಷಗಾನ ಖ್ಯಾತ ಕಲಾವಿದ, ಜನಪ್ರಿಯ ಸ್ತ್ರೀ ವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ.
* ಗುರು ಮಟಪಾಡಿ ವೀರಭದ್ರ ನಾಯಕ್ ಪುರಸ್ಕಾರ
* ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಕತ್ವ
ಉಡುಪಿ: ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಹಭಾಗಿತ್ವದ ಗುರು ಮಟಪಾಡಿ ವೀರಭದ್ರ ನಾಯಕ್ 'ಯಕ್ಷಸಾಧಕ' 2026ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆ.1ರಂದು ಸಂಜೆ 4 ಗಂಟೆಗೆ ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿವಾಣ ನೃತ್ಯದ ಖ್ಯಾತ ಸ್ತ್ರೀ ವೇಷಧಾರಿ
ಕರ್ನಾಟಕದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸ್ತ್ರೀ ವೇಷಧಾರಿ ಎಂದೇ ಪ್ರಸಿದ್ಧರಾದ ಸುಬ್ರಹ್ಮಣ್ಯ ಹೆಗಡೆ, ಹೊನ್ನಾವರ ತಾಲೂಕಿನ ಯಲಗುಪ್ಪದಲ್ಲಿ ವಿಷ್ಣು ಹೆಗಡೆ ಹಾಗೂ ಇಂದಿರಾ ಹೆಗಡೆ ದಂಪತಿ ಸುಪುತ್ರರು. ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದು, ಹೆರಂಜಾಲು ವೆಂಕಟರಮಣ ಗಾಣಿಗ ಅವರು ಯಕ್ಷಗಾನ ಗುರುಗಳಾಗಿದ್ದಾರೆ. ಗುಂಡಬಾಳ ಮೇಳ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ತಿರುಗಾಟ ಮಾಡಿದ್ದು, ಪ್ರಸ್ತುತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಭಾವತಿ, ಮೇನಕೆ, ರಂಭೆ, ದಾಕ್ಷಾಯಿಣಿ ಪಾತ್ರಗಳಿಗೆ ಜೀವತುಂಬಿದ್ದಾರೆ. ಹರಿವಾಣದಲ್ಲಿ ನೃತ್ಯ ಇವರ ವಿಶೇಷತೆಯಾಗಿದೆ. ಯಕ್ಷಗಾನ ಹಾಡುಗಾರಿಕೆ ಹಾಗೂ ಪುರುಷ ವೇಷಗಳ ನಿರ್ವಹಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ವ್ಯಾಕರಣಶುದ್ಧ ಶಬ್ದೋಚ್ಛಾರ, ಪ್ರೌಢ ಮಾತುಗಾರಿಕೆ, ಯಕ್ಷಗಾನ ಶೈಲಿಯ ಕಂಠಸ್ವರ, ಪಾತ್ರದ ಚೌಕಟ್ಟಿನೊಳಗೇ ನಿರೂಪಣೆ, ನಾಜೂಕು ಅಭಿನಯ ಇವರ ವಿಶಿಷ್ಟತೆಯಾಗಿದೆ.