ಉಡುಪಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ವತಿಯಿಂದ ಆಯೋಜಿಸಿದ್ದ ವರಕವಿ ದ.ರಾ. ಬೇಂದ್ರೆ ಜನ್ಮದಿನಾಚರಣೆಯಲ್ಲಿ ಶಿಕ್ಷಕಿ ಸಹನಾ ಮಾತನಾಡಿದರು. ಶ್ರೀನಿವಾಸ್​ ರಾವ್​ ಕೆ., ಉಮೇಶ್​ ಇದ್ದರು. 
ಉಡುಪಿ

ಬೇಂದ್ರೆ ಸಾಹಿತ್ಯದಿಂದ ಲಭಿಸಲಿದೆ ಜೀವನ ಜ್ಞಾನ

* ಸಗ್ರಿ ಶಾಲೆಯ ಶಿಕ್ಷಕಿ ಸಹನಾ ಅಭಿಪ್ರಾಯ 

* ಸಮಾನ ಮನಸ್ಕ ವೇದಿಕೆಯಿಂದ ಜನ್ಮದಿನಾಚರಣೆ

ಉಡುಪಿ: ಇಂದಿನ ಆಧುನಿಕ ಭರಾಟೆ ಹಾಗೂ ಯಾಂತ್ರೀಕೃತ ಜೀವನದ ಒತ್ತಡಗಳ ನಡುವೆ ಶ್ರೇಷ್ಠ ಸಾಹಿತಿಗಳು ರಚಿಸಿರುವ ಕೃತಿಗಳ ಅಧ್ಯಯನ ಕಾಣದಾಗಿದೆ. ಕಡುಬಡತನದಲ್ಲಿ ಬೆಳೆದ ದ.ರಾ. ಬೇಂದ್ರೆ ಅವರು ಸಾಹಿತ್ಯದ ಉತ್ತುಂಗ ತಲುಪಿದವರು. ಬದುಕಿನಲ್ಲಿ ಕಂಡ ದು:ಖ, ನೋವು, ನಿರಾಶೆಗಳನ್ನೇ ಕಾವ್ಯವಾಗಿಸಿ ಜನರ ಬದುಕನ್ನು ಅನಾವರಣಗೊಳಿಸಿದ್ದಾರೆ. ಯುವಸಮುದಾಯಕ್ಕೆ ಓದುವ ಅಭಿರುಚಿಯೇ ಇಲ್ಲದಾಗಿದೆ. ವಿದ್ಯಾರ್ಥಿಗಳು ಬೇಂದ್ರೆ ಅವರ ಸಾಹಿತ್ಯ ಓದಬೇಕು. ಅದರಿಂದ ಜೀವನದ ಜ್ಞಾನ ಲಭಿಸಲಿದೆ ಎಂದು ಶಿಕ್ಷಕಿ ಸಹನಾ ಅಭಿಪ್ರಾಯಪಟ್ಟರು.
ಉಡುಪಿಯ ಸಗ್ರಿ ವಾರ್ಡ್​ನಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ವತಿಯಿಂದ ಶನಿವಾರ (ಜ.31) ಆಯೋಜಿಸಿದ್ದ ವರಕವಿ ದ.ರಾ. ಬೇಂದ್ರೆ ಅವರ 130ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಸಾಹಿತ್ಯದಲ್ಲಿದೆ ಶ್ರೀಮಂತಿಕೆ

ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಮಾತನಾಡಿ, ಬೇಂದ್ರೆಯವರ ಬದುಕೇ ಸಾಹಿತ್ಯವಾಗಿದೆ. ಅವರ ಬದುಕಿನಲ್ಲಿ ಬಡತನವಿದ್ದರೂ ರಚಿಸಿದ್ದ ಸಾಹಿತ್ಯದಲ್ಲಿ ಜ್ಞಾನ ಶ್ರೀಮಂತಿಕೆ ಇದೆ. ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠದಂತಹ ಅತ್ಯುನ್ನತ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂದೂ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಾದ ಹರೀಶ್​, ಸುನೀತಾ, ಉಮೇಶ್​, ಅನೂಷಾ, ಶಿವಮೂರ್ತಿ, ಸುರೇಶ್​ ಡಿ., ಅನುರಾಧಾ ಜಿ.ಎಸ್​., ಶ್ರೀನಿವಾಸ್​ ಡಿ., ವಾಸುದೇವ್​ ಪಿ., ಕಾವ್ಯಾ, ಉಷಾ, ಲಕ್ಷ್ಮೀ, ವಿಜಯಲಕ್ಷ್ಮೀ, ವೀಣಾ, ಉಮಾ, ವನಜಾ, ಕಲ್ಪನಾ, ಅಕ್ಷತಾ, ವಿಜಯ್​, ವಿದ್ಯಾ ಇತರರಿದ್ದರು.