ಅಮೆರಿಕದ ಪ್ರತಿಷ್ಠಿತ 'ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ' ಆಯೋಜಿಸಿದ್ದ ಇಂಟರ್ಕ್ಲಬ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿ ಗಳಿಸಿದ ಉಡುಪಿಯ ಖ್ಯಾತ ಛಾಯಾಗ್ರಾಹಕ ಆಸ್ಟ್ರೋ ಮೋಹನ್.
* ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೆ ಮಿಂಚಿದ ಮೋಹನ್
ಉಡುಪಿ: ಉಡುಪಿಯ ಹಿರಿಯ ಫೋಟೋ ಪತ್ರಕರ್ತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ಅಮೆರಿಕದ ಪ್ರತಿಷ್ಠಿತ "ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ' ಆಯೋಜಿಸಿದ್ದ 2025-26ನೇ ಸಾಲಿನ ಇಂಟರ್ಕ್ಲಬ್ ಛಾಯಾಚಿತ್ರ ಸ್ಪರ್ಧೆಯ ಮೂರನೇ ಸುತ್ತಿನ ಎರಡು ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಗೌರವಕ್ಕೆ ಭಾಜನರಾಗಿದ್ದಾರೆ.
ಸ್ಪರ್ಧೆಯ ವರ್ಣಚಿತ್ರ ವಿಭಾಗದಲ್ಲಿ ಅವರ 'ಗೋಲ್ಡನ್ ಚಾರ್ಜ್' ಚಿತ್ರಕ್ಕೆ ಮೆರಿಟ್ ಪ್ರಶಸ್ತಿ ಲಭಿಸಿದ್ದು, ಪ್ರವಾಸ ಛಾಯಾಚಿತ್ರ ವಿಭಾಗದಲ್ಲಿ 'ಬೆಂಕಿಯೇ ಪ್ರಾರ್ಥನೆಯಾದಾಗ' ಎಂಬ ಚಿತ್ರಕ್ಕೆ ಗೌರವಾನ್ವಿತ ವಿಶೇಷ ಉಲ್ಲೇಖ (ಹೊನರೇಬಲ್ ಮೆನ್ಶನ್) ಪ್ರಶಸ್ತಿ ಲಭಿಸಿದೆ.
'ಗೋಲ್ಡನ್ ಚಾರ್ಜ್' ಚಿತ್ರಕ್ಕೆ ಮೆರಿಟ್ ಪ್ರಶಸ್ತಿ ಲಭಿಸಿರುವುದು. ಆಸ್ಟ್ರೋ ಮೋಹನ್ ಅವರ ಕ್ಯಾಮರಾದಲ್ಲಿ ಸೆರೆಯಾಗುವ ಚಿತ್ರಗಳು ಕೇವಲ ಕಲಾತ್ಮಕತೆಯ ಪ್ರತೀಕಗಳಲ್ಲ. ಅವು ಭಾರತೀಯ ಸಂಸ್ಕೃತಿಯ ಬೇರು, ಜನಜೀವನದ ನೈಜತೆ ಹಾಗೂ ಭಾವನಾತ್ಮಕ ಕ್ಷಣಗಳ ಆಳವನ್ನು ವಿಶ್ವದ ವೇದಿಕೆಯಲ್ಲಿ ಪ್ರತಿಧ್ವನಿಸುವಂತೆ ಮಾಡುವ ದೃಶ್ಯಕಾವ್ಯಗಳಾಗಿವೆ. ಅವರಿಗೆ ಲಭಿಸಿರುವ ಈ ಪ್ರಶಸ್ತಿಯು ಕನ್ನಡಿಗರ ಕೀರ್ತಿಯು ಜಾಗತಿಕ ಮಟ್ಟದಲ್ಲಿ ಬೆಳಗುವಂತಾಗಿದೆ.
'ಬೆಂಕಿಯೇ ಪ್ರಾರ್ಥನೆಯಾದಾಗ' ಚಿತ್ರಕ್ಕೆ ಹೊನರೇಬಲ್ ಮೆನ್ಶನ್ ಪ್ರಶಸ್ತಿ ಲಭಿಸಿರುವುದು. "
ಛಾಯಾಚಿತ್ರವೆಂದರೆ ಕೇವಲ ದೃಶ್ಯ ದಾಖಲೆಯಲ್ಲ. ಅದು ಸಂಸ್ಕೃತಿಯ ಸ್ಪಂದನ, ಮಣ್ಣಿನ ಪರಿಮಳ. ಜೀವನದ ತೀವ್ರ ಕ್ಷಣಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಶಕ್ತಿಯುತ ಭಾಷೆ. ಪ್ರಶಸ್ತಿಗೆ ಭಾಜನವಾದ ಚಿತ್ರದ ಪ್ರತಿ ಫ್ರೇಮ್ ಒಂದೊಂದು ಕಥೆ ಹೇಳುತ್ತದೆ. ಸ್ಥಳೀಯ ಸಂಸ್ಕೃತಿ ಇದರ ಮೂಲ ಹಂದರವಾಗಿದೆ.
— ಆಸ್ಟ್ರೋ ಮೋಹನ್. ಹಿರಿಯ ಫೋಟೋ ಪತ್ರಕರ್ತ, ಉಡುಪಿ.