ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಶೋಧ ಕಾರ್ಯ ನಡೆಸಿದ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ.
* ಜಿಲ್ಲಾ ಪೊಲೀಸ್, ಶ್ವಾನ ದಳದಿಂದ ತೀವ್ರ ಶೋಧ
* ಟಿಎನ್ಎಲ್ ಎಸ್. ಮಾರನ್ ಎಂಬಾತನಿಂದ ಇ-ಮೇಲ್
ಉಡುಪಿ: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ಇಲಾಖೆ, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ತಂಡವು ಕೋರ್ಟ್ ಹಾಲ್ ಹಾಗೂ ಹೊರಾಂಗಣದಲ್ಲಿ ಸೋಮವಾರ (ಜೂ.22) ಮಧ್ಯಾಹ್ನ ತೀವ್ರ ಶೋಧ ನಡೆಸಿತು.
ಉಡುಪಿ ಜಿಲ್ಲಾ ನ್ಯಾಯಾಲಯದ ಆಡಳಿತ ವಿಭಾಗದ ಇ-ಮೇಲ್ ಐಡಿಗೆ ಜೂ.21ರಂದು ಸಂಜೆ 6.33ಕ್ಕೆ ಸಂದೇಶ ಬಂದಿದೆ. ಆರ್ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿತ್ತು.
ಉಡುಪಿ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ. ಭಾನುವಾರವಾಗಿದ್ದರಿಂದ ಕೋರ್ಟ್ಗೆ ರಜಾ ಇದ್ದು, ಸೋಮವಾರ (ಜೂ.22) ಬೆಳಗ್ಗೆ 10:30ಕ್ಕೆ ಆಡಳಿತ ವಿಭಾಗದ ಸಿಬ್ಬಂದಿ ಇ-ಮೇಲ್ ಪರಿಶೀಲಿಸುವಾಗ ಬಾಂಬ್ ಬೆದರಿಕೆಯ ಸಂದೇಶ ಇರುವುದನ್ನು ಗಮನಿಸಿದ್ದಾರೆ. ತಕ್ಷಣ ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತಂದು, ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡಲಾಗಿತ್ತು.
ಗಂಟೆಗಳ ಕಾಲ ಕಲಾಪ ಸ್ಥಗಿತ
ಬೆಳಗ್ಗೆ ಕೋರ್ಟ್ ಆರಂಭಗೊಳ್ಳುತ್ತಿದ್ದಂತೆ ವಿವಿಧ ಕೇಸ್ಗಳ ವಿಚಾರಣೆ ಆರಂಭಗೊಂಡಿತ್ತು. ಆದರೆ, ಬಾಂಬ್ ಬೆದರಿಕೆ ಕರೆಯ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ತಂಡವು ಕಾರ್ಯಾಚರಣೆಗಾಗಿ ಕೋರ್ಟ್ಗೆ ಆಗಮಿಸಿತ್ತು. ಹೀಗಾಗಿ ಒಂದು ತಾಸುಗಳ ಕಾಲ ಕಾರ್ಯಕಲಾಪ ಸ್ಥಗಿತಗೊಳಿಸಿ ಎಲ್ಲೆಡೆ ಶೋಧ ನಡೆಸಲಾಯಿತು.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಹಾಗೂ ಅನೇಕ ಸಿಬ್ಬಂದಿ ಕೋರ್ಟ್ ಸಂಕೀರ್ಣಕ್ಕೆ ಭೇಟಿ ನೀಡಿ, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ನ್ಯಾಯಾಲಯದ ಎಲ್ಲ ಕೋಣೆ, ಹಾಲ್, ಶೌಚಾಲಯ ಮತ್ತು ಕೋರ್ಟ್ ಆವರಣದ ಹೊರಗೂ ತಪಾಸಣೆ ನಡೆಸಿದರು. ನಂತರ ಅದೊಂದು ಸಂಶಯಿತ ಹುಸಿ ಕರೆಯೆಂದು ತಿಳಿದು ಬಂದಿದ್ದರಿಂದ ನ್ಯಾಯಾಲಯದ ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಡಲಾಯಿತು. ಉಡುಪಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇ-ಮೇಲ್ ಸಂದೇಶದಲ್ಲಿ ಏನಿತ್ತು?
ಟಿಎನ್ಎಲ್ ಎಸ್. ಮಾರನ್ ಎಂಬಾತನ ಹೆಸರಿನಲ್ಲಿ ಇ-ಮೇಲ್ ಬಂದಿತ್ತು. ಆರ್ಡಿಎಕ್ಸ್ 2+2 ಬಾಂಬ್ಅನ್ನು ಉಡುಪಿ ಹಾಗೂ ತಂಜಾವೂರು ಕೋರ್ಟ್ನ ನ್ಯಾಯಾಧೀಶರ ಛೇಂಬರ್ ಹಾಗೂ ಶೌಚಾಲಯಗಳಲ್ಲಿ ಇಡಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಏಕಕಾಲದಲ್ಲಿ ಬ್ಲಾಸ್ಟ್ ಆಗಲಿದೆ ಎಂದು ಬೆದರಿಕೆ ಒಡ್ಡಿದ್ದನು. ಉದಯನಿಧಿ ಸ್ಟಾಲಿನ್ (49) ಎಂಬಾತ 2023ರಲ್ಲಿ ನಿರ್ಭಯಾ (31) ಎಂಬಾಕೆಯನ್ನು ಅತ್ಯಾಚಾರ ಮಾಡಿ, ಕಿರುಕುಳ ನೀಡಿದ್ದಾನೆ. ಆ ಕುರಿತ ಎಲ್ಲ ಸಾಕ್ಷ್ಯಗಳು ಎಡಬ್ಲುಪಿಎಸ್ ಮತ್ತು ಕೇರಳ ಪೊಲೀಸರ ಬಳಿ ಇವೆ. ಚೆನ್ನೈನ ಸವೇರಾ ಹೋಟೆಲ್ನಲ್ಲಿ ನಡೆದ ಘಟನೆಗಳು, ವಿವಿಧ ಮಹಿಳಾ ಹಕ್ಕುಗಳ ಗುಂಪುಗಳಿಗೆ ಕಳುಹಿಸಲಾದ ದೂರುಗಳ ವಿವರ ಸಂಗ್ರಹಿಸಲು ಕೇರಳ ಪೊಲೀಸರೊಂದಿಗೆ ಎಡಬ್ಲುಪಿಎಸ್ ಪ್ರತಿಕ್ರಿಯಿಸಿದೆ. ಆದರೂ ಪ್ರಬಲ ಅತ್ಯಾಚಾರಿಯ ವಿರುದ್ಧ ಕ್ರಮ ಹಾಗೂ ಮಹಿಳೆಗೆ ನ್ಯಾಯ ಸಿಗಲಿಲ್ಲ. ಹೀಗಾಗಿ ಉದಯನಿಧಿ ಸ್ಟಾಲಿನ್ ವಿರುದ್ಧ ನಾವು ದಕ್ಷಿಣದ ನಕ್ಸಲೈಟ್ ಘಟಕಗಳು ವ್ಯವಸ್ಥೆಯ ವಿರುದ್ಧದ ಧಿಕ್ಕಾರದ ಸಂಕೇತವಾಗಿ ನ್ಯಾಯಾಲಯ/ನ್ಯಾಯಾಧೀಶರನ್ನು ನಾಶ ಮಾಡಲು ನಿರ್ಧರಿಸಿದ್ದೇವೆ ಎಂದು ಬೆದರಿಕೆ ನೀಡಿದ್ದನು. ಮೇಲ್ನ ಕೊನೆಯಲ್ಲಿ ಇಂಕಿಲಾಬ್ ಜಿಂದಾಬಾದ್ ಎಂದು ನಮೂದಿಸಿದ್ದಾನೆ.
ಡಿಸ್ಟ್ರಿಕ್ಟ್ ಕೋರ್ಟ್ಗೆ ಭದ್ರತೆ ಹೆಚ್ಚಿಸಿ
* ವಕೀಲರ ಸಂಘ ಆಗ್ರಹ
ರೆನೋಲ್ಡ್ ಪ್ರವೀಣ್ ಕುಮಾರ್. ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಘಟನೆ ಅತ್ಯಂತ ಖಂಡನೀಯ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಯದ ವಾತಾವರಣ ಸೃಷ್ಟಿಸುವ ದುರುದ್ದೇಶದ ಕೃತ್ಯವಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯ ದೇವಾಲಯಕ್ಕೆ ಇಂತಹ ಬೆದರಿಕೆಯು ನ್ಯಾಯಾಂಗದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಪ್ರಯತ್ನವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಬೆದರಿಕೆ ಹಾಕಿದ ವ್ಯಕ್ತಿ ಅಥವಾ ಸಂಘಟನೆಯನ್ನು ಕೂಡಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಪುನರಾವರ್ತನೆಯಾಗದಂತೆ, ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಉಡುಪಿ ನ್ಯಾಯಾಲಯಕ್ಕೆ ಇನ್ನಷ್ಟು ಭದ್ರತೆ ಒದಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.