ಉಜಿರೆ ದೇವಳ ಬ್ರಹ್ಮಕಲಶ ಧಾರ್ಮಿಕ ಸಭೆಯನ್ನು ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು. ಶರತ್‌ಕೃಷ್ಣ ಪಡುವೆಟ್ನಾಯ, ಶಶಿಧರ ಶೆಟ್ಟಿ ಬರೋಡ, ವಿಷ್ಣು ಮರಾಠೆ ಮತ್ತಿತರರಿದ್ದರು. 
ಉಡುಪಿ

ಶ್ರದ್ಧೆ, ನಂಬಿಕೆಯೇ ಭಕ್ತಿಯ ಮೂಲ

ಬೆಳ್ತಂಗಡಿ: ನಾನು ನನ್ನದು ಎಂಬ ಅಹಂಭಾವದಿಂದ ಹೊರ ಬಂದು ಕಾಲದ ಪ್ರವಾಹವನ್ನು ಎದುರಿಸುತ್ತಾ ಗೌರವಯುತ ಜೀವನ ನಡೆಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರದ್ಧೆ, ನಂಬಿಕೆ ಭಕ್ತಿಯ ಮೂಲವಾಗಿದ್ದು, ಆಸ್ತಿಕತೆ ಎಂಬ ಸಂಪತ್ತನ್ನು ಕಾಪಾಡಿಕೊಳ್ಳಬೇಕು, ದೇವರು ಕೊಟ್ಟ ಸಂಪತ್ತನ್ನು ಪುಣ್ಯ ಕಾರ್ಯಗಳಿಗೆ ಉಪಯೋಗಿಸಬೇಕು. ದೇವರಿಗೆ ಭಕ್ತನ ಕರ್ತವ್ಯ ಪ್ರೀತಿಯಾಗುತ್ತದೆಯೇ ಹೊರತು ಸಂಪತ್ತಲ್ಲ ಎಂದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ನೀಡಿದ್ದಾರೆ. ಅಳಿಲ ಸೇವೆ ಅತ್ಯಂತ ಪ್ರಾಮುಖ್ಯವಾಗಿದ್ದು, ಇದು ಪ್ರತಿ ಕಾರ್ಯದ ಅಡಿಪಾಯವಾಗಿದೆ. ದೇವರು ಭಕ್ತನಿಂದ ತನ್ನ ಇಚ್ಛೆಯಂತೆ ಸೇವೆ ಮಾಡಿಸಿಕೊಳ್ಳುತ್ತಾನೆ ಎಂದರು.
ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬೆಳ್ತಂಗಡಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಜಿಲ್ಲಾ ತುಳು ಶಿವಳ್ಳಿ ಸಭಾ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ಬೆಳ್ತಂಗಡಿ, ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ, ಉಜಿರೆ ಎಸ್‌ಡಿಎಂ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜನಾರ್ದನ, ಉದ್ಯಮಿಗಳಾದ ಪ್ರವೀಣ್ ಕುಮಾರ್, ಇಂದ್ರ, ಜಿ.ಪ್ರಭಾತ್ ಭಟ್, ಕನ್ಯಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಹರೀಶ್ ರಾವ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬೆಳ್ತಂಗಡಿ ಕರ‌್ಹಾಡ ಬ್ರಾಹ್ಮಣ ಸಭಾ ಅಧ್ಯಕ್ಷ ವಿಷ್ಣು ಭಟ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ.ಸುವರ್ಣ, ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ತುಕಾರಾಮ ಬಿ. ಉಪಸ್ಥಿತರಿದ್ದರು.
ಬ್ರಹ್ಮರಕೂಟ್ಲು ಬಿ.ಎಸ್. ಬ್ಯಾಂಡ್‌ನ ಬಿ.ಭೋಜ ಮತ್ತು ತಂಡದವರನ್ನು ಸನ್ಮಾನಿಸಲಾಯಿತು. ರಾಜಗೋಪುರ ನಿರ್ಮಾಣ ಸಮಿತಿ ಸಹ ಕೋಶಾಧಿಕಾರಿ ಸಂಜೀವ ಶೆಟ್ಟಿ ಸ್ವಾಗತಿಸಿದರು. ಎಸ್‌ಡಿಎಂ ಐ.ಟಿ.ಕಾಲೇಜು ಉಪನ್ಯಾಸಕ ರವೀಶ್ ಪಡುಮಲೆ ನಿರೂಪಿಸಿದರು.

ಉಜಿರೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ನಗರಿಯಾಗಿ ಬೇರೆ ಬೇರೆ ರೀತಿಯಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುತ್ತಿರುವ ಬ್ರಹ್ಮಕಲಶ ಅತ್ಯಂತ ಅಚ್ಚುಕಟ್ಟಿನ ಕಾರ್ಯಕ್ರಮವಾಗಿದೆ. ಇಲ್ಲಿ ಸಮಾಜವನ್ನು ಒಂದುಗೂಡಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ.