ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬುಕಿಂಗ್ ಕೌಂಟರ್ ಅನ್ನು ಪುತ್ತೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕ ರವೀಂದ್ರ ನಾಯ್ಕ ಎಂ. ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸೌಂದರ್ಯ ಎಂ. ಮೊದಲಾದವರಿದ್ದರು.
ಬಂಟ್ವಾಳ: ವಕೀಲರು ಹಾಗೂ ನ್ಯಾಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಂಚೆ ಸೇವೆ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ಬಂಟ್ವಾಳ ವಕೀಲರ ಸಂಘದ ಕಚೇರಿಯಲ್ಲಿ ಅಂಚೆ ಇಲಾಖೆಯ ಸ್ವಯಂ ಬುಕಿಂಗ್ ಕೌಂಟರ್ ಆರಂಭಿಸಲಾಗಿದೆ ಎಂದು ಪುತ್ತೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕ ರವೀಂದ್ರ ನಾಯ್ಕ ಎಂ. ತಿಳಿಸಿದರು.
ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ಕೌಂಟರ್ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸೌಂದರ್ಯ ಎಂ. ಗೌರವ ಅತಿಥಿಗಳಾಗಿದ್ದರು.
ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ಟಾ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ. ಅಂಚೆ ಇಲಾಖೆಯಿಂದ ಲಭ್ಯವಾಗುವ ವಿವಿಧ ಸವಲತ್ತುಗಳನ್ನು ವಕೀಲರು ಹಾಗೂ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಈ ಕೌಂಟರ್ ಸಹಕಾರಿಯಾಗಲಿದೆ ಎಂದರು.
ಪುತ್ತೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಬಿ., ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್, ಉಪಾಧ್ಯಕ್ಷ ದಯಾನಂದ ರೈ, ಜಂಟಿ ಕಾರ್ಯದರ್ಶಿ ಅಕ್ಷತಾ ಶೆಟ್ಟಿ, ಖಜಾಂಚಿ ಜೆಸಿಂತಾ ಕ್ರಾಸ್ತಾ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ನರೇಂದ್ರನಾಥ ಭಂಡಾರಿ ಸ್ವಾಗತಿಸಿ, ವಂದಿಸಿದರು.
ವಕೀಲರಿಗೆ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಅಂಚೆ ಕಚೇರಿಗೆ ತೆರಳಿ ಸೇವೆ ಪಡೆಯುವುದು ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ವಕೀಲರ ಸಂಘದ ಕಚೇರಿಯಲ್ಲೇ ಕೌಂಟರ್ ಆರಂಭಿಸಿರುವುದು ಶ್ಲಾಘನೀಯ. ಇದರಿಂದ ವಕೀಲರಿಗೆ ಸಮಯ ಉಳಿತಾಯವಾಗಲಿದ್ದು, ನ್ಯಾಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೂ ಅನುಕೂಲವಾಗಲಿದೆ.
— ರಾಜೇಂದ್ರ ಪ್ರಸಾದ್, ಪ್ರಧಾನ ಸಿವಿಲ್ ನ್ಯಾಯಾಧೀಶ