ಉಡುಪಿಯಲ್ಲಿ ಆಯೋಜಿಸಿದ್ದ ಬೆಲ್ಟ್ ಕುಸ್ತಿ ಪಂದ್ಯಾಟಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಮಾರುತಿ, ಮಂಜುನಾಥ್ ಭಟ್, ಗೋಪಾಲಕೃಷ್ಣ ಭಟ್, ದಿನಕರ್ ಹೇರೂರು, ರಮೇಶ್ ಎಸ್.ಸಿ., ದಿನೇಶಕುಮಾರ್ ಎ., ಜೀವನಕುಮಾರ್ ಶೆಟ್ಟಿ, ಸತೀಶ್ ಹೆಗ್ಡೆ, ಅಲ್ತಾಫ್ ಬೆಳಗಾವಿ ಇದ್ದರು.
* ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿವಿಮಾತು
* ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ' ಉದ್ಘಾಟನೆ
ಉಡುಪಿ: ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಆತ್ಮಹತ್ಯೆಯಂತಹ ಕುಕೃತ್ಯದಲ್ಲಿ ತೊಡಗುವ ವಿಚಾರ ಕಟ್ಟಿಹಾಕಿ, ಜೀವನದಲ್ಲಿ ಕಂಡು ಬರುವ ಸೋಲನ್ನು ಸಮರ್ಥವಾಗಿ ಎದುರಿಸಿ. 'ಬೆಲ್ಟ್ ಕುಸ್ತಿ' ಹಳೆಯದಾದರೂ ಅಪರೂಪದ ಕ್ರೀಡೆ. ಕರಾವಳಿ ಭಾಗಕ್ಕೆ ಇದು ಹೊಸತಾಗಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿವಿಮಾತು ಹೇಳಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಉಪನಿರ್ದೇಶಕರ ಕಚೇರಿ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಕಟಪಾಡಿ ಆಶ್ರಯದಲ್ಲಿ ಸೋಮವಾರ (ಡಿ.22) ಆಯೋಜಿಸಿದ್ದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ 'ಬೆಲ್ಟ್ ಕುಸ್ತಿ' ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾರಂಪರಿಕ ಕ್ರೀಡೆ
ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ, ಬೆಲ್ಟ್ ಕುಸ್ತಿಯು ಪಾರಂಪರಿಕ ಕ್ರೀಡೆಯಾಗಿದ್ದು, ರಾಜರ ಕಾಲದಿಂದಲೂ ಇತ್ತು. ರಾಜ್ಯದಲ್ಲಿ ಇತ್ತೀಚೆಗಷ್ಟೇ ಈ ಕ್ರೀಡೆ ಬೆಳಕಿಗೆ ಬರುತ್ತಿದೆ. ಇಂತಹ ಪಂದ್ಯಾಟಗಳಲ್ಲಿ ಸ್ಪರ್ಧಿಸಿ ನಮ್ಮ ದೇಶದ ಹಳೆಯ ಕ್ರೀಡೆಯ ಉಳಿವಿಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ್ ಭಟ್, ಸಂಘದ ಕಾರ್ಯದರ್ಶಿ ರಮೇಶ್ ಎಸ್.ಸಿ., ಶಾಲಾ ಶಿಕ್ಷಣ ಇಲಾಖೆಯ ಕ್ರೀಡಾ ಸಂಚಾಲಕ ದಿನೇಶಕುಮಾರ್ ಎ., ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಜೀವನಕುಮಾರ್ ಶೆಟ್ಟಿ, ಅಧ್ಯಕ್ಷ ಸತೀಶ್ ಹೆಗ್ಡೆ, ಬೆಲ್ಟ್ ಕುಸ್ತಿ ಫೆಡರೇಷನ್ನ ಕರ್ನಾಟಕದ ಉಪಾಧ್ಯಕ್ಷ ಅಲ್ತಾಫ್ ಬೆಳಗಾವಿ ಉಪಸ್ಥಿತರಿದ್ದರು.
ಪಂದ್ಯದ ವೀಕ್ಷಕರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀನಿವಾಸ್ ಪಾಲ್ಗೊಂಡಿದ್ದರು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಮಾರುತಿ ಸ್ವಾಗತಿಸಿದರು. ತ್ರಿಶಾ ಪಿಯು ಕಾಲೇಜು ಪ್ರಾಂಶುಪಾಲ ಹರಿಪ್ರಸಾದ್ ವಂದಿಸಿದರು. ಕನ್ನಡ ಉಪನ್ಯಾಸಕ ಧೀರಜ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದ ಚಿಕ್ಕೋಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಚಿಕ್ಕೋಡಿ, ಉಡುಪಿ ಚಾಂಪಿಯನ್
ಪಂದ್ಯಾಟದಲ್ಲಿ ರಾಜ್ಯದಿಂದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಾಲಕರ ವಿಭಾಗದಲ್ಲಿ ಚಿಕ್ಕೋಡಿ ಜಿಲ್ಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಶೆಟ್ಟಿ, ಕೆ.ಸತ್ಯೇಂದ್ರ ಪೈ, ಸಿಎ ಲೋಕೇಶ್ ಶೆಟ್ಟಿ, ಉಡುಪಿ ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ನಿಕಟಪೂರ್ವ ಅಧ್ಯಕ್ಷ ವರ್ಗಿಸ್ ಪಿ. ಇತರರಿದ್ದರು.
ಉಡುಪಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ನಿರಂತರವಾಗಿ ಇರಬೇಕು. ಕಲಿಕೆ ಅವಧಿಯಲ್ಲೇ ಸಮಾಜಮುಖಿಯಾಗಿ ಕೆಲಸ ಮಾಡುವ, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಸಂಸತಿ, ಸಂಪ್ರದಾಯ, ಯೋಗ, ಪ್ರಾಣಾಯಾಮ, ಗುರು-ಹಿರಿಯರಿಗೆ ನೀಡುವ ಗೌರವಾದರಗಳು ವಿದೇಶಿಯರ ಗಮನ ಸೆಳೆಯುತ್ತಿದೆ. ಆದರೆ, ನಾವು ಪಾಶ್ಚಿಮಾತ್ಯರ ಸಂಸ್ಕೃತಿಗೆ ಜೋತುಬೀಳುತ್ತಿದ್ದೇವೆ. ನಮ್ಮತನವನ್ನು ವಿದ್ಯಾರ್ಥಿಗಳು ಅರಿತು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.