ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಉಡುಪಿಯ ಪ್ರಸಾದ ನೇತ್ರಾಲಯದ ಶಾಖೆಯನ್ನು ವಿಶ್ವಪ್ರಸನ್ನ ಶ್ರೀ ಉದ್ಘಾಟಿಸಿದರು. ಮಂಕಾಳ ವೈದ್ಯ, ಡಾ. ಕೃಷ್ಣ ಪ್ರಸಾದ ಕೂಡ್ಲು, ಪ್ರಶಾಂತ್​ ವಿಲ್ಸನ್​ ಫೆರ್ನಾಂಡಿಸ್​, ಇನಾಯತುಲ್ಲಾ ಶಾಬಂದ್ರಿ, ಡಾ. ವಿಶ್ವನಾಥ ನಾಯಕ, ಡಾ. ವಿನೀತಾ ನಾಯಕ, ರಶ್ಮಿ ಕೃಷ್ಣ ಪ್ರಸಾದ, ಅಣ್ಣಪ್ಪ ಎಂ. ನಾಯ್ಕ ಇದ್ದರು. 
ಉಡುಪಿ

ಕಣ್ಣಿನ ಆರೋಗ್ಯದ ಜಾಗ್ರತೆ ಅತ್ಯಗತ್ಯ

* ಉಡುಪಿ ಪೇಜಾವರ ವಿಶ್ವಪ್ರಸನ್ನ ಶ್ರೀ ಆಶೀರ್ವಚನ

* ಭಟ್ಕಳದಲ್ಲಿ ಪ್ರಸಾದ ನೇತ್ರಾಲಯದ ಶಾಖೆ ಉದ್ಘಾಟನೆ

ಉಡುಪಿ: ಪ್ರಸಾದ ನೇತ್ರಾಲಯವು ಜನರ ಕಣ್ಣಿಗೆ ಎದುರಾಗುವ ಎಲ್ಲ ತೊಂದರೆ ನಿವಾರಿಸಲು 10ಕ್ಕೂ ಹೆಚ್ಚು ಆಸ್ಪತ್ರೆಯ ಮೂಲಕ ಚಿಕಿತ್ಸೆ ನೀಡುತ್ತಿದೆ. ಇದೀಗ ತನ್ನ ಸೇವಾ ವ್ಯಾಪ್ತಿಯನ್ನು ಭಟ್ಕಳಕ್ಕೆ ವಿಸ್ತರಿಸಿರುವುದು ಉತ್ತಮ ನಿರ್ಧಾರ. ಅದರಿಂದಾಗಿ ಉಭಯ ಜಿಲ್ಲೆಗಳ ಜನರಿಗೂ ಕಣ್ಣಿನ ಚಿಕಿತ್ಸೆಗೆ ಸಹಾಯವಾಗುತ್ತದೆ. 'ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ' ಎಂಬ ಮಾತಿನಂತ ಕಣ್ಣಿನ ಆರೋಗ್ಯದಲ್ಲಿ ತೊಂದರೆ ಬಾರದಂತೆ ಜಾಗ್ರತೆ ವಹಿಸುವುದು ಉತ್ತಮ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಾಗರ ರಸ್ತೆಯ ಮಾರ್ಗದಲ್ಲಿರುವ ನಾಯಕ ಹೆಲ್ತ್​ ಸೆಂಟರ್​ನಲ್ಲಿ ಉಡುಪಿಯ ಪ್ರಸಾದ ನೇತ್ರಾಲಯ ಸೂಪರ್​ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಶಾಖೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಗತ್ಯ ಸಹಕಾರದ ಭರವಸೆ

ಭಟ್ಕಳದ ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಮಾಂಕಾಳ ಎಸ್​. ವೈದ್ಯ ಮಾತನಾಡಿ, ಕಣ್ಣಿನ ಆರೋಗ್ಯ ರಕ್ಷಣೆ ಹಾಗೂ ಸೇವೆಯಲ್ಲಿ ಉಡುಪಿಯ ಪ್ರಸಾದ ನೇತ್ರಾಲಯವೂ ದೇಶದಲ್ಲಿ ಹೆಸರುವಾಸಿಯಾಗಿದೆ. ನಮ್ಮ ಭಟ್ಕಳದ ಜನತೆಗೂ ಸೇವೆ ನೀಡಲು ಸಜ್ಜಾಗಿರುವುದು ಸಂತಸದ ಸಂಗತಿ. ಇಲ್ಲಿಯ ಬಡ ರೈತರು, ಮೀನುಗಾರರು ಚಿಕಿತ್ಸೆಗಾಗಿ ಇನ್ನಿತರ ಜಿಲ್ಲೆ ಅವಲಂಬಿಸುವುದು ಇನ್ನು ಕೊನೆಗೊಳ್ಳಲಿದೆ. ಸಂಸ್ಥೆಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.

ಅವರ್​ ಲೇಡಿ ಆಫ್​ ಲಾರ್ಡ್ಸ್​ ಚರ್ಚ್​ನ ಫಾದರ್​ ಪ್ರಶಾಂತ ವಿಲ್ಸನ್​ ಫೆರ್ನಾಂಡಿಸ್​, ಮಜ್ಲಿಸ್​-ಎ-ಇಸ್ಲಾಂ-ಒ-ತನ್ಜೀಮ್​ನ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಭಟ್ಕಳ ಅಧ್ಯಕ್ಷ ಅಣ್ಣಪ್ಪ ಎಂ. ನಾಯ್ಕ ಶುಭಹಾರೈಸಿದರು.

ಭಟ್ಕಳ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ವಿಶ್ವನಾಥ ನಾಯಕ, ನಾಯಕ ಹೆಲ್ತ್​ ಕೇರ್​ನ ನಿರ್ದೇಶಕಿ, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ವಿನೀತಾ ನಾಯಕ, ಪ್ರಸಾದ ನೇತ್ರಾಲಯ ಸಮೂಹ ಆಸ್ಪತ್ರೆಗಳ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ ಉಪಸ್ಥಿತರಿದ್ದರು.

ಪ್ರಸಾದ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಸಣ್ಣ ಸಣ್ಣ ಊರುಗಳಲ್ಲಿಯೂ ತಂತ್ರಜ್ಞಾನದ ವೈದ್ಯಕೀಯ ಸೇವೆ ನೀಡುವುದು ನಮ್ಮ ಉದ್ದೇಶ. ಮಿತ್ರರಾದ ನೇತ್ರತಜ್ಞ ಡಾ. ವಿಶ್ವನಾಥ ನಾಯಕ ಅವರ ಆಶಯದಂತೆ ಭಟ್ಕಳದಲ್ಲಿ ಉನ್ನತಿಕರಿಸಿದ ನೇತ್ರ ಸೇವೆ ನೀಡಲಾಗುವುದು. ಜನರು ಸಹಕರಿಸಬೇಕು ಹಾಗೂ ಪ್ರಯೋಜನ ಪಡೆಯಬೇಕು.
ನಾಡೋಜ ಡಾ. ಕೃಷ್ಣ ಪ್ರಸಾದ ಕೂಡ್ಲು. ಪ್ರಸಾದ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ಸ್ಥಾಪಕ.