ಉಡುಪಿ ಅಜ್ಜರಕಾಡು ಕಾಲೇಜ್​ನಲ್ಲಿ ಆಯೋಜಿಸಿದ್ದ 'ವಿಶ್ವ ಮಾನಸಿಕ ಆರೋಗ್ಯ ದಿನ' ಕಾರ್ಯಕ್ರಮದಲ್ಲಿ ಡಾ. ಫ್ಲಾವಿಯಾ ಶಾರ್ಲೆಟ್​ ನೊರೊನ್ಹಾ ಮಾತನಾಡಿದರು. ಪ್ರತಿಭಾ ಲಿಡಿಯಾ ಬ್ರಾಗ್ಸ್​, ಪ್ರೊ.ನಿಕೇತನಾ, ಎಡ್ವರ್ಡ್​ ಲೋಬೊ, ಡಾ. ಅಬ್ದುಲ್​ ರಜಾಕ್​ ಇದ್ದರು. 
ಉಡುಪಿ

ಅತಿಯಾದ ನಿರೀಕ್ಷೆಯೇ ಭ್ರಮೆ, ಖಿನ್ನತೆಗೆ ಕಾರಣ

* ಉಪನ್ಯಾಸಕಿ ಪ್ರತಿಭಾ ಲಿಡಿಯಾ ಬ್ರಾಗ್ಸ್​ ಅನಿಸಿಕೆ

* ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ: ಸಾಮರ್ಥ್ಯಕ್ಕೆ ಮೀರಿದ ನಿರೀಕ್ಷೆಗಳು ಯುವಜನರಲ್ಲಿ ಭ್ರಮೆ ಹಾಗೂ ಖಿನ್ನತೆಗೆ ಕಾರಣವಾಗಬಹುದು. ಆರಂಭಿಕ ಆಕರ್ಷಣೆಯನ್ನೇ ಜೀವನಪರ್ಯಂತದ ಬಾಂಧವ್ಯವೆಂದು ತಪ್ಪಾಗಿ ಭಾವಿಸಬಾರದು ಎಂದು ವಿದ್ಯಾರ್ಥಿಗಳಿಗೆ ಮಣಿಪಾಲ ಕಾಲೇಜ್​ ಆಫ್​ ನರ್ಸಿಂಗ್​ನ ಮಾನಸಿಕ ಆರೋಗ್ಯ (ಮನೋವೈದ್ಯಕೀಯ) ವಿಭಾಗದ ಉಪನ್ಯಾಸಕಿ ಪ್ರತಿಭಾ ಲಿಡಿಯಾ ಬ್ರಾಗ್ಸ್​ ಕಿವಿಮಾತು ಹೇಳಿದರು.

ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ನ ಸ್ನಾತಕೋತ್ತರ ವಿಭಾಗದ ಎವಿ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​), ಮಣಿಪಾಲ ಕಾಲೇಜ್​ ಆಫ್​ ನರ್ಸಿಂಗ್​ನ ಮನೋವೈದ್ಯಕಿಯ ವಿಭಾಗ ಹಾಗೂ ಲಯನ್ಸ್​ ಕ್ಲಬ್​ ಸಂತೆಕಟ್ಟೆ ಸಹಭಾಗಿತ್ವದಲ್ಲಿ ಸೋಮವಾರ (ಅ.12) ಆಯೋಜಿಸಿದ್ದ 'ವಿಶ್ವ ಮಾನಸಿಕ ಆರೋಗ್ಯ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಕಾರಾತ್ಮಕ ಚಟುವಟಿಕೆ

ಮಣಿಪಾಲ ಕಾಲೇಜ್​ ಆಫ್​ ನರ್ಸಿಂಗ್​ನ ಸಹಾಯಕ ಪ್ರಾಧ್ಯಾಪಕಿ ಡಾ. ಫ್ಲಾವಿಯಾ ಶಾರ್ಲೆಟ್​ ನೊರೊನ್ಹಾ ಮಾತನಾಡಿ, ನಿರಂತರ ಮೊಬೈಲ್​ ವೀಕ್ಷಣೆಯಿಂದ ಕೋಪ, ಆತಂಕ ಮತ್ತು ಖಿನ್ನತೆ ಉಂಟಾಗುತ್ತದೆ. ಅದನ್ನು ನಿಭಾಯಿಸಿ ದೈಹಿಕ ಶಕ್ತಿ ವೃದ್ಧಿಸಿಕೊಳ್ಳಲು ಇನ್ನಿತರ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

ಕಾಲೇಜ್​ನ ಪ್ರಾಂಶುಪಾಲೆ ಪ್ರೊ.ನಿಕೇತನಾ ಮಾತನಾಡಿ, ಇತರರ ಸಕಾರಾತ್ಮಕ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್​ ಕ್ಲಬ್​ ಸಂತೆಕಟ್ಟೆಯ ಅಧ್ಯಕ್ಷ ಲ.ಎಡ್ವರ್ಡ್​ ಲೋಬೊ, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಅಬ್ದುಲ್​ ರಜಾಕ್​, ಎನ್​ಎಸ್​ಎಸ್​ ಅಧಿಕಾರಿಗಳಾದ ರಾಕೇಶ್​ ಮತ್ತು ಡಾ.ಸಫಿಯಾ, ಉಪನ್ಯಾಸಕರಾದ ಸೋನಿಯಾ ನೊರೊನ್ಹಾ, ಸ್ಮಿತಾ, ಶಶಿಕಲಾ ಉಪಸ್ಥಿತರಿದ್ದರು.

ಈ ವರ್ಷದ ಘೋಷಣೆಯಾದ 'ಅನುಭವಗಳಿಗೆ ಕಿವಿಯಾಗಿ: ನೈಜ ಧ್ವನಿಗಳು, ನೈಜ ಬದಲಾವಣೆ' ಎಂಬ ಆಶಯದಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ನಿರ್ಮಲಾ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಸ್ವಾಗತಿಸಿದರು. ಲಹರಿ ವಂದಿಸಿದರು.