ಕುಂದಾಪುರ: ಅನಾದಿ ಕಾಲದಿಂದಲೂ ಜಾತಿ ಪದ್ಧತಿ, ತಾರತಮ್ಯ, ಬೇಧ-ಭಾವದ ವಿರುದ್ಧ ಹೋರಾಟಗಳು ನಡೆದಿದ್ದರೂ ಇಂದಿಗೂ ಅಂತಹ ಘಟನೆಗಳು ಜೀವಂತವಾಗಿರುವುದು ವಿಪರ್ಯಾಸ. ಜಾತಿಯ ಹೆಸರಿನಲ್ಲಿ ದೌರ್ಜನ್ಯ ಮಾಡುವುದನ್ನು ತಡೆಗಟ್ಟಲು ಪ.ಜಾತಿ, ಪ.ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ. ಸಂವಿಧಾನ ಪೀಠಿಕೆಯಲ್ಲಿರುವಂತೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂಬುದನ್ನು ಅರಿಯಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ಬಾರ್ ಅಸೋಸಿಯೇಷನ್, ಅಭಿಯೋಗ ಇಲಾಖೆ, ಮತ್ತು ಕುಂದಾಪುರ ತಾಲೂಕು ಪಂಚಾಯಿತಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಅಂಗವಾಗಿ ಕುಂದಾಪುರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಸೋಮವಾರ ನಡೆದ ಕಾನೂನು ಮಾಹಿತಿ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಅವರು "ಪರಿಶಿಷ್ಟ ಜಾತಿ-, ಪ.ಪಂಗಡ ಕಾಯ್ದೆ ಮತ್ತು ಇಲಾಖಾ ಸೌಲಭ್ಯ'ಗಳ ಬಗ್ಗೆ ಮಾಹಿತಿ ನೀಡಿದರು.
ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಸರ್ಕಾರಿ ಅಭಿಯೋಜಕಿ ಇಂದಿರಾ ನಾಯ್ಕ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಶಾದೇವಿ ನಾಯಕ್, ಕುಂದಾಪುರ ವಕೀಲರ ಸಂಘ ಅಧ್ಯಕ್ಷ ಜೆ.ಶ್ರೀನಾಥ್ ರಾವ್, ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಗುರುಮೂರ್ತಿ ಮೊದಲಾದವರಿದ್ದರು.
ಅನೂಪ್ ಶೇಟ್ ಸ್ವಾಗತಿಸಿದರು. ಚರಣ್ ನಿರೂಪಿಸಿದರು. ರಮೀಝಾ ವಂದಿಸಿದರು.