ವಂಡ್ಸೆ ಗ್ರಾಮದ ಬಾಳಿಕೆರೆ ಸಮೀಪದ ಆತ್ರಾಡಿ ಬಳಿ ಚಕ್ರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟು 
ಉಡುಪಿ

ಕೋಟಿ ರೂ.ತಂದರೂ ನೀರಿಗಿಲ್ಲ ತಡೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಂಡ್ಸೆ ಗ್ರಾಮದ ಬಾಳಿಕೆರೆ ಸಮೀಪದ ಆತ್ರಾಡಿ ಬಳಿ ಚಕ್ರಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡು ವರ್ಷ ಕಳೆದರೂ ರೈತರಿಗೆ ಇನ್ನೂ ಅದರ ಪೂರ್ಣ ಪ್ರಮಾಣದ ಪ್ರಯೋಜನ ಸಿಕ್ಕಿಲ್ಲ. ಮತ್ತೆ ದುರಸ್ತಿ ಮಾಡಿದರೂ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಗಟ್ಟಲು ಸಾಧ್ಯವಾಗಿಲ್ಲ.
ಅಣೆಕಟ್ಟಿನಲ್ಲಿ ನಿರಂತರ ನೀರು ಸೋರಿಕೆಯಾಗುತ್ತಿದ್ದು, ಈವರೆಗೆ ಸಂಗ್ರಹಿಸಿದ ನೀರನ್ನೂ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಹಾಗಾದರೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ ಏನು ಪ್ರಯೋಜನ ಎಂದು ಈ ಭಾಗದ ರೈತರು ಪ್ರಶ್ನಿಸುತ್ತಿದ್ದಾರೆ.

ನೂರಾರು ಎಕರೆ ಕೃಷಿ ಭೂಮಿ

ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ, ವಂಡ್ಸೆ, ಕಟ್‌ಬೇಲ್ತೂರು, ದೇವಲ್ಕುಂದ ಗ್ರಾಮಗಳ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ಮಹತ್ವಾಕಾಂಕ್ಷೆ ಉದ್ದೇಶದಿಂದ ಆತ್ರಾಡಿ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು ಸಣ್ಣ ನೀರಾವರಿ ಇಲಾಖೆಯಿಂದ 7.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಭತ್ತ, ಅಡಕೆ ಬೆಳೆಗಳಿಗೆ ನೀರು ಒದಗಿಸುವುದಲ್ಲದೆ ಬೇಸಿಗೆಯಲ್ಲಿ ಈ ಭಾಗದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಈ ಡ್ಯಾಂ ಪ್ರಯೋಜನ ಆಗಬೇಕಿತ್ತು.

ನಾಲ್ಕನೇ ಕಿಂಡಿ ಅಣೆಕಟ್ಟು

ಚಕ್ರಾ ನದಿಗೆ ಹಕ್ಲಾಡಿ ಗ್ರಾಮದ ತೋಪ್ಲುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದೇ ನದಿಗೆ ಕಮಲಶಿಲೆ ಸಮೀಪದ ಕಬ್ಬಿನಾಲೆ ಹಾಗೂ ಹಳ್ಳಿಹೊಳೆಯಲ್ಲಿ 2 ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆತ್ರಾಡಿಯದು ಈ ನದಿಗೆ ನಾಲ್ಕನೇ ಕಿಂಡಿ ಅಣೆಕಟ್ಟು. ಈ ಅಣೆಕಟ್ಟಿನ ಮೇಲ್ಭಾಗದಲ್ಲಿ ಸಿಹಿ ನೀರು ಸಂಗ್ರಹವಾಗುವುದರಿಂದ ಆತ್ರಾಡಿ ಕಿಂಡಿ ಅಣೆಕಟ್ಟಿಗೆ ಉಪ್ಪು ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಹಾಗಾಗಿ ಭರಪೂರ ಸಿಹಿ ನೀರು ಹಿಡಿದಿಡುವ ಸಾಮರ್ಥ್ಯ ಆತ್ರಾಡಿ ಅಣೆಕಟ್ಟಿಗಿದೆ. ಅದರಿಂದ ವಂಡ್ಸೆ ಹೋಬಳಿಗೆ ನೀರಿನ ಪೂರೈಕೆ, ಮುಖ್ಯವಾಗಿ ವಂಡ್ಸೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಕ್ಕಂತಾಗಲಿದೆ. ಆದರೆ ನೀರು ಸೋರಿಕೆಯಾಗುವುದರಿಂದ ಕಾಮಗಾರಿ ನೀರು ಪಾಲಾಗುವ ಆತಂಕ ಎದುರಾಗಿದೆ.

ದುರಸ್ತಿಯಾದರೂ ಪ್ರಯೋಜನವಿಲ್ಲ?

ಕಳಪೆ ಕಾಮಗಾರಿಯಿಂದ ಡ್ಯಾಂ ನಿರ್ಮಿಸಿದ ವರ್ಷದೊಳಗೆ ನೀರು ಸೋರಿಕೆಯಾಗುತ್ತಿದ್ದರಿಂದ ರೈತರಿಂದ ಆಕ್ರೋಶ ವ್ಯಕ್ತವಾಗಿತ್ತು. ಮತ್ತೆ ದುರಸ್ತಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 2 ಕೋಟಿ ರೂ. ಹೆಚ್ಚುವರಿಯಾಗಿ ಮಂಜೂರಾಗಿತ್ತು. ಈ ಹೊಸ ಕಾಮಗಾರಿಯಲ್ಲಿ ಬೆಡ್ ಎತ್ತರಿಸಿದ್ದಲ್ಲದೆ, ಡ್ಯಾಂನ ಎತ್ತರ ಏರಿಸಿ, ಹೆಚ್ಚಿನ ನೀರು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ. ಇದಲ್ಲದೆ ಎರಡೂ ಬದಿ ನದಿ ದಂಡೆ ನಿರ್ಮಿಸಲಾಗಿದೆ. ಈಗ ಕಾಮಗಾರಿ ಪೂರ್ಣಗೊಂಡು, ಹಲಗೆ ಸಹ ಅಳವಡಿಸಲಾಗಿದೆ. ಕೆಲವು ದಿನ ನೀರು ತುಂಬಿತ್ತು. ಆದರೆ ಈಗ ಕಿಂಡಿಗಳಲ್ಲಿ ಅಳವಡಿಸಿದ ಹಲಗೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಅನುದಾನ ತಂದು ದುರಸ್ತಿ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ನೀರು ನಿಲ್ಲಿಸದಿದ್ದರೆ ಏನು ಪ್ರಯೋಜನ ಎಂದು ರೈತರು ಪ್ರಶ್ನಿಸಿದ್ದಾರೆ.

ನೀರು ನಿಲ್ಲದಿದ್ದರೆ ಯಾಕೆ ಡ್ಯಾಂ?

ಹಿಂದೆಯೂ ನೀರು ನಿಲ್ಲುವುದಿಲ್ಲ ಅಂತ ಹೇಳಿ ದುರಸ್ತಿ ಕಾಮಗಾರಿಗೆ ಒತ್ತಾಯಿಸಿದ್ದೆವು. ಈಗ ದುರಸ್ತಿ ಕಾಮಗಾರಿ ಕೈಗೊಂಡರೂ ನೀರು ಸೋರಿಕೆಯಾಗದಂತೆ ತಡೆಯಲು ಸಾಧ್ಯವಾಗಿಲ್ಲ. ಇನ್ನೆಂಥ ಕಾಮಗಾರಿ ಮಾಡುವುದು? ಹೀಗೆ ಆದರೆ ರೈತರಿಗೆ, ಜನರಿಗೆ ಕುಡಿಯುವ ನೀರಿಗೆ ಏನು ಪ್ರಯೋಜನ ಮಾಡಿದಂತಾಗಲಿದೆ? ನದಿಯಲ್ಲಿ ನೀರಿನ ಹರಿವು ನಿಲ್ಲಲಿದ್ದು, ಡ್ಯಾಂನಲ್ಲಿ ಇಂಗಿರುವ ನೀರು ಸೋರಿಕೆಯಾದರೆ ಡ್ಯಾಂ ಇದ್ದು ಏನು ಪ್ರಯೋಜನ ಎಂದು ವಂಡ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೊಡ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಲ ದುರಸ್ತಿ ಮಾಡಿದರೂ ಡ್ಯಾಂನಲ್ಲಿ ಮಾತ್ರ ನೀರು ನಿಲ್ಲುವ ವ್ಯವಸ್ಥೆ ಇಲ್ಲ. ಬೆಡ್ ಕೂಡ ಹಾಳು ಮಾಡಿದ್ದಾರೆ. ನದಿ ದಂಡೆ ಒಂದು ಪ್ರಯೋಜನವಾಗಲಿದೆ ಅಷ್ಟೇ. ನೀರು ಸೋರಿಕೆ ಆಗುವುದನ್ನು ತಡೆಗಟ್ಟಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ರೈತರಿಗೆ ಪ್ರಯೋಜನವಾಗುವಂತೆ ಕಾಮಗಾರಿ ಮಾಡಲಿ.

ಬಾಳಿಕೆರೆ ಸಮೀಪದ ಅತ್ರಾಡಿ ಡ್ಯಾಂನಲ್ಲಿ ಈಗ ದುರಸ್ತಿ ಕಾಮಗಾರಿ ಮಾಡಲಾಗಿದೆ. ನೀರು ಸೋರಿಕೆಗೆ ತಡೆಯೊಡ್ಡುವ ಹಾಗೂ ನದಿ ದಂಡೆ ಕಾಮಗಾರಿ ನಡೆಸಲಾಗಿದೆ. ಡ್ಯಾಂನಲ್ಲಿ ಹೆಚ್ಚಿನ ನೀರು ಸಂಗ್ರಹಿಸುವ ಸಲುವಾಗಿ ಡ್ಯಾಂ ಎತ್ತರಿಸಲಾಗಿದೆ. ಒಟ್ಟಾರೆ 2 ಕೋಟಿ ರೂ. ವೆಚ್ಚದ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ನೀರು ಸೋರಿಕೆ ತಡೆಯುವ ಪ್ರಯತ್ನ ಮಾಡಲಾಗಿದೆ.