ಶೇಖ್ ಅಮ್ಮರ್ ಬಿನ್ ಹುಮೈದ್ ಅಲ್ ನುಐಮಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಉಪಸ್ಥಿತರಿದ್ದರು.  
ಉಡುಪಿ

ಪಶುವೈದ್ಯಕೀಯ ಬೋಧನಾ ಆಸ್ಪತ್ರೆ-ಕಾಲೇಜು ಸ್ಥಾಪನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಯುಎಇಯ ಪ್ರಾಣಿ ಆರೋಗ್ಯ ರಕ್ಷಣೆ ಮತ್ತು ಪಶುವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ತುಂಬೆ ಗ್ರೂಪ್ ಯುಎಇಯ ಪ್ರಥಮ ಖಾಸಗಿ ಪಶುವೈದ್ಯಕೀಯ ಬೋಧನಾ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ಮಂಗಳವಾರ ಅಧಿಕೃತ ಚಾಲನೆ ನೀಡಿದೆ.
ಅಜ್ಮಾನ್‌ನ ಯುವರಾಜ ಹಾಗೂ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶೇಖ್ ಅಮ್ಮರ್ ಬಿನ್ ಹುಮೈದ್ ಅಲ್ ನುಐಮಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಉಪಸ್ಥಿತರಿದ್ದರು.
ಯುಎಇಯಲ್ಲಿ ಸುಧಾರಿತ ಪಶು ವೈದ್ಯಕೀಯ ಆರೈಕೆ ಮತ್ತು ಶಿಕ್ಷಣಕ್ಕಾಗಿ ಸರ್ಕಾರಿ ಸಂಸ್ಥೆಗಳು ಅಥವಾ ವಿದೇಶಿ ಶಿಕ್ಷಣವನ್ನು ಅವಲಂಬಿಸಬೇಕಾಗಿತ್ತು. ಈಗ 85 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಹೊಸ ತುಂಬೆ ಆಸ್ಪತ್ರೆ ಮತ್ತು ಕಾಲೇಜು ಈ ಕೊರತೆಯನ್ನು ನೀಗಿಸಲಿದೆ. ಸಣ್ಣ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳಿಂದ ಹಿಡಿದು ಯುಎಇಯ ಹೆಮ್ಮೆಯ ಸಂಕೇತಗಳಾದ ಕುದುರೆ, ಒಂಟೆ ಹಾಗೂ ಇತರ ಜಾನುವಾರುಗಳಿಗೆ ಒಂದೇ ಸೂರಿನಡಿ ಅತ್ಯಾಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಈ ಸಂಕೀರ್ಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಸ್ತ್ರಚಿಕಿತ್ಸಾ ಕೊಠಡಿಗಳು, ರೋಗನಿರ್ಣಯ ಚಿತ್ರಣ(ಡಯಾಗ್ನಾಸ್ಟಿಕ್ ಇಮೇಜಿಂಗ್), ತೀವ್ರ ನಿಗಾ ಘಟಕ ಮತ್ತು ಪ್ರಯೋಗಾಲಯಗಳು ಇರಲಿವೆ.

ಜಾಗತಿಕ ಪಾಲುದಾರಿಕೆ

ಈ ಕಾಲೇಜು ತುಂಬೆ ಗ್ರೂಪ್‌ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್ ಇದರ ಪ್ರಮುಖ ಪದವಿಯಾಗಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತರಬೇತಿ ನೀಡಲು ಕಾಲೇಜು ವಿಶ್ವದ ಹೆಸರಾಂತ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.
ಲಂಡನ್‌ನ ರಾಯಲ್ ವೆಟರ್ನರಿ ಕಾಲೇಜು ಹಾಗೂ ರಷ್ಯಾದ ಡಾನ್ ಸ್ಟೇಟ್ ಯುನಿವರ್ಸಿಟಿ ಜತೆ ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗ ಹೊಂದಿದೆ. ಭಾರತದ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಜುಕೇಶನ್ ಮತ್ತು ರಿಸರ್ಚ್ ಜತೆ ಸಂಶೋಧನಾ ಪಾಲುದಾರಿಕೆ ಹೊಂದಿದೆ. ಶಾರ್ಜಾ ಈಕ್ವಿನ್ ಹಾಸ್ಪಿಟಲ್(ಕುದುರೆ ಚಿಕಿತ್ಸೆ), ಶಾರ್ಜಾ ಫಾಲ್ಕನ್ ಹಾಸ್ಪಿಟಲ್(ಹದ್ದುಗಳ ಚಿಕಿತ್ಸೆ) ಮತ್ತು ಯುಎಕ್ಯೂ ಕ್ಯಾಮೆಲ್ ಬ್ರೀಡಿಂಗ್ ಸೆಂಟರ್(ಒಂಟೆ ತಳಿ ಅಭಿವೃದ್ಧಿ ಕೇಂದ್ರ)ಗಳೊಂದಿಗೆ ಪ್ರಾಯೋಗಿಕ ತರಬೇತಿಗಾಗಿ ಒಪ್ಪಂದ ಮಾಡಿಕೊಂಡಿದೆ. ಈ ಕಾಲೇಜಿನ ಪ್ರವೇಶ ಪ್ರಕ್ರಿಯೆ, ಕೋರ್ಸ್‌ಗಳ ವಿವರಗಳು ಮತ್ತು ಮುಂಬರುವ ಅಲ್ಪಾವಧಿ ತರಬೇತಿಗಳ ಮಾಹಿತಿಗಾಗಿ ಆಸಕ್ತರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮೂರು ದಶಕದ ಹಿಂದೆ ತುಂಬೆ ಸಂಸ್ಥೆಯನ್ನು ಆರಂಭಿಸಿದಾಗ, ಯುಎಇ ಜನತೆಗೆ ಜಾಗತಿಕ ಮಟ್ಟದ ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವುದು ನಮ್ಮ ಗುರಿಯಾಗಿತ್ತು. ಇಂದು ಆ ಭರವಸೆಯನ್ನು ನಮ್ಮ ಮನೆ, ಫಾರ್ಮ್‌ಗಳು ಮತ್ತು ನಮ್ಮ ಪರಂಪರೆಯ ಭಾಗವಾಗಿರುವ ಪ್ರಾಣಿಗಳಿಗೂ ವಿಸ್ತರಿಸುತ್ತಿದ್ದೇವೆ. ನಮ್ಮ ಮಾನವ ಆಸ್ಪತ್ರೆಗಳು ಯಾವ ಉನ್ನತ ಗುಣಮಟ್ಟಕ್ಕೆ ಹೆಸರಾಗಿವೆಯೋ, ಅದೇ ಗುಣಮಟ್ಟದ ಚಿಕಿತ್ಸೆಯನ್ನು ಪಶುವೈದ್ಯಕೀಯ ಆಸ್ಪತ್ರೆಯೂ ನೀಡಲಿದೆ.

— ಡಾ.ತುಂಬೆ ಮೊಯ್ದೀನ್, ಸಂಸ್ಥಾಪಕ ಅಧ್ಯಕ್ಷರು, ತುಂಬೆ ಗ್ರೂಪ್

ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದಲೇ ಕ್ಲಿನಿಕಲ್ ಅನುಭವ ಸಿಗುವಂತೆ ಪಠ್ಯಕ್ರಮ ರೂಪಿಸಲಾಗಿದೆ. ಮುಂದಿನ ಹಂತದಲ್ಲಿ ಇಲ್ಲಿ ಲಾಯ ಹಾಗೂ ಜಾನುವಾರು ಕೊಟ್ಟಿಗೆಗಳನ್ನೊಳಗೊಂಡ ಸ್ವಂತ ಬೋಧನಾ ಫಾರ್ಮ್ ನಿರ್ಮಾಣವಾಗಲಿದೆ. ಇದು ವಿದ್ಯಾರ್ಥಿಗಳಿಗೆ ಅದ್ಭುತ ಕಲಿಕಾ ವಾತಾವರಣ ಸೃಷ್ಟಿಸಲಿದೆ.

— ಪ್ರೊ. ಮಂದಾ ವೆಂಕಟರಮಣ, ಚಾನ್ಸಲರ್, ಗಲ್ಫ್ ಮೆಡಿಕಲ್ ಯುನಿವರ್ಸಿಟಿ