ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ನಂದಿಕೂರು ವಿಶೇಷ ಆರ್ಥಿಕ ವಲಯದ ಬಳಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕ ಆರಂಭದ ದಿನಗಳಿಂದಲೂ ಪರಿಸರಕ್ಕೆ ಒಂದಿಲ್ಲೊಂದು ಸಮಸ್ಯೆಯನ್ನು ತಂದೊಡ್ಡುತ್ತಿದೆ. ಕಟ್ಟಿಗೆಗಾಗಿ ಅರಣ್ಯಗಳ ನಾಶ, ಹಾರುಬೂದಿಯಿಂದ ಪರಿಸರದ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ, ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.
ಆರಂಭದಲ್ಲಿ ಘಟಕಕ್ಕಾಗಿ ಶಾಂಭವಿ ನದಿಯಿಂದ ನೀರು ಬಳಸಲು ಯತ್ನಿಸಿದ್ದು, ಗ್ರಾಮಸ್ಥರ ಹೋರಾಟದಿಂದ ಅದಕ್ಕೆ ಕಡಿವಾಣ ಬಿತ್ತು. ಆದರೆ ಜಲ ಮತ್ತು ವಾಯು ಮಾಲಿನ್ಯವಾಗುತ್ತಿದ್ದು ಇದರ ವಿರುದ್ಧ ಗ್ರಾಮಸ್ಥರು ಹೋರಾಟ ಮುಂದುವರಿಸುತ್ತಾ ಬಂದಿದ್ದರು. ಈ ನಡುವೆ ಸಮಸ್ಯೆ ಬಗೆಹರಿಸುವ ಸಲುವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಘಟಕಕ್ಕೆ ಭೇಟಿ ನೀಡಿ ಸೂಚನೆ ನೀಡಿದರೂ ಅದು ಪಾಲನೆಯಾಗಿರಲಿಲ್ಲ.
ಪಾಲನೆಯಾಗದ ಮಾನದಂಡ
2024ರಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಸಂಗ್ರಹಿಸಿದ್ದ ನೀರಿನ ಹಾಗೂ ಮಣ್ಣಿನ ವಿವಿಧ ಮಾದರಿಗಳ ಪರೀಕ್ಷೆಯಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಫಲಿತಾಂಶಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪರಿಸರ ನಿಯಂತ್ರಣ ಮಂಡಳಿಯು ಘಟಕಕ್ಕೆ ನೋಟಿಸ್ ನೀಡಿತ್ತು. ಮಂಡಳಿ ನೀಡಿದ ನೋಟಿಸ್ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಘಟಕದಲ್ಲಿ ರಿಫೈನಿಂಗ್ ಕಾರ್ಯವನ್ನು ಕೆಲದಿನಗಳಷ್ಟೇ ಸ್ಥಗಿತಗೊಳಿಸಲಾಗಿತ್ತು ಎಂದು ಹೋರಾಟಗಾರರು ಹೇಳುತ್ತಾರೆ.
ಘಟಕದಿಂದ ದುರ್ವಾಸನೆ ಹೊರಬರುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನ ಪಾಲನೆಯಾಗುತ್ತಿಲ್ಲವೆಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡುವಂತೆ ಮಾಡಿದೆ. ಘಟಕದಿಂದಾಗುವ ದುಷ್ಪರಿಣಾಮ ಹಾಗೂ ಅವ್ಯವಹಾತವಾಗಿ ಅರಣ್ಯ ನಾಶವಾಗುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರೂ, ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಘಟಕದ ಸಮಸ್ಯೆ ಕುರಿತಂತೆ ಮಾಹಿತಿ ಪಡೆಯಲು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯನ್ನು ಪತ್ರಿಕೆ ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ.
ಘಟಕದಿಂದ ಹೊರಸೂಸುವ ದುರ್ವಾಸನೆ ಹಾಗೂ ಹಾರುಬೂದಿಯನ್ನು ಎಲ್ಲೆಂದರಲ್ಲಿ ಸುರಿದು ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಹೋರಾಟ ನಿಲ್ಲುವುದಿಲ್ಲ. ಅಧಿಕಾರಿಗಳು ಕೂಡಾ ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಮುಂದಿನ ವಾರದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಯೋಗ ತೆರಳಲು ಯೋಚಿಸಲಾಗಿದೆ.
ಘಟಕದಿಂದ ಹೊರಸೂಸುವ ದುರ್ವಾಸನೆ ಹಾಗೂ ಹಾರುಬೂದಿಯನ್ನು ಎಲ್ಲೆಂದರಲ್ಲಿ ಸುರಿದು ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಹೋರಾಟ ನಿಲ್ಲುವುದಿಲ್ಲ. ಅಧಿಕಾರಿಗಳು ಕೂಡಾ ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಮುಂದಿನ ವಾರದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಯೋಗ ತೆರಳಲು ಯೋಚಿಸಲಾಗಿದೆ.
ರಸ್ತೆ ಬದಿ ಹಾರುಬೂದಿ ಸುರಿದಿರುವ ಬಗ್ಗೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲಿಖಿತ ಹಾಗೂ ಮೌಖಿಕವಾಗಿ ದೂರು ನೀಡಲಾಗಿದೆ. ಘಟಕದಿಂದಾಗುವ ಸಮಸ್ಯೆ ಕುರಿತಂತೆ ಹೋರಾಟ ಸಮಿತಿಯಿಂದ 15 ದಿನಗಳ ಹಿಂದೆ ಗ್ರಾಮಸ್ಥರ ಸಭೆಯನ್ನು ನಡೆಸಲಾಗಿದೆ. ಮುಂದಿನ ಪಲಿಮಾರು ಗ್ರಾಮಸಭೆಯಲ್ಲಿ ಘಟಕದ ವಿರುದ್ಧ ಕ್ರಮಕ್ಕೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು.