ಉಡುಪಿಯ ತೆಂಕನಿಡಿಯೂರು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಶಿವಾನಂದ್ ಯಲಿಗರ್ ಉದ್ಘಾಟಿಸಿದರು. ಪ್ರೊ. ನಿತ್ಯಾನಂದ್ ವಿ. ಗಾಂವ್ಕರ್, ಡಾ.ವಿಷ್ಣುಮೂರ್ತಿ ಪ್ರಭು, ಡಾ. ಶ್ರೀಧರ್ ಭಟ್, ಪೃಥ್ವಿರಾಜ್ ನಾಯಕ್, ಶ್ರುತಿ, ಬಿಂದು ಟಿ. ಇತರರಿದ್ದರು.
* ತೆಂಕನಿಡಿಯೂರು ಕಾಲೇಜಿನಲ್ಲಿ ಉದ್ಯಮಶೀಲತಾ ಅರಿವು ಕಾರ್ಯಾಗಾರ
ಉಡುಪಿ: ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ)ಯಿಂದಾಗಿ ಎಲ್ಲೆಡೆ ಸ್ಪರ್ಧೆ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿಸಿ ಉದ್ಯಮಿಗಳಾಗಲು ಚಿಂತಿಸಬೇಕು. ಅಪಾಯ ನಿರ್ವಹಣೆಯೊಂದಿಗೆ ಮಾರುಕಟ್ಟೆಯ ಅಗತ್ಯತೆ ಅರ್ಥಮಾಡಿಕೊಳ್ಳಬೇಕು. ಧೈರ್ಯದಿಂದ ಹೊಸ ಆಲೋಚನೆಯೊಂದಿಗೆ ತಂತ್ರಜ್ಞಾನ ಬಳಸಿ ಕಾರ್ಯರೂಪಕ್ಕೆ ತರಬೇಕು ಎಂದು ಉಡುಪಿ ಸೆಡಾಕ್ ಸಂಸ್ಥೆಯ ಡೆಪ್ಯುಟಿ ನಿರ್ದೇಶಕ ಶಿವಾನಂದ್ ಯಲಿಗರ್ ಸಲಹೆ ನೀಡಿದರು.
ಉಡುಪಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ (ಸೆಡಾಕ್) ಉಡುಪಿ ವತಿಯಿಂದ ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ಐಕ್ಯೂಎಸಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಕಾರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ್ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಪೃಥ್ವಿರಾಜ್ ನಾಯಕ್ ಹಾಗೂ ಶ್ರುತಿ ಉಪಸ್ಥಿತರಿದ್ದರು.
ಬಿಕಾಂ ವಿದ್ಯಾರ್ಥಿನಿ ತೇಜಸ್ವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಬಿಂದು ಟಿ. ಸ್ವಾಗತಿಸಿದರು. ಪಿಜಿ ವಿಭಾಗದ ಪ್ಲೇಸ್ಮೆಂಟ್ ಸೆಲ್ ಆಫೀಸರ್ ಮರ್ವಿನ್ ಡಿಸೋಜ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸುವಲ್ಲಿ ಸಂಸ್ಥೆ ತೊಡಗಿಕೊಂಡಿದೆ. ಸರ್ಕಾರದ ವಿವಿಧ ಉದ್ಯಮಶೀಲತಾ ಯೋಜನೆ, ತರಬೇತಿ, ಮಾರ್ಗದರ್ಶನ ಹಾಗೂ ಹಣಕಾಸು ಸೌಲಭ್ಯಗಳ ಸದುಪಯೋಗದಿಂದ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಉದ್ಯೋಗಾವಕಾಶ ಸೃಷ್ಟಿಸಬೇಕು.
— ಶಿವಾನಂದ್ ಯಲಿಗರ್. ಉಡುಪಿ ಸೆಡಾಕ್ ಸಂಸ್ಥೆಯ ಡೆಪ್ಯುಟಿ ನಿರ್ದೇಶಕ.